ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಸುಲಭ ಜಯ: ಲೆವಿ ಅತಿವೇಗದ ಶತಕ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಹ್ಯಾಮಿಲ್ಟನ್ (ರಾಯಿಟರ್ಸ್): ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಿಚರ್ಡ್ ಲೆವಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಗಳಿಸಿದ ಸಾಧನೆ ಮಾಡಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಲೆವಿ ಕೇವಲ 45 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು.

ಲೆವಿ ಗಳಿಸಿದ ಅಜೇಯ 117 ರನ್‌ಗಳ (51 ಎಸೆತ, 5 ಬೌಂ, 13 ಸಿಕ್ಸರ್) ನೆರವಿನಿಂದ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳ ಗೆಲುವು ಪಡೆಯಿತು. ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ಕಿವೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 173 ರನ್ ಪೇರಿಸಿತು.

ದಕ್ಷಿಣ ಆಫ್ರಿಕಾ 16 ಓವರ್‌ಗಳಲ್ಲಿ 2 ವಿಕೆಟ್‌ಗೆ 174 ರನ್ ಗಳಿಸಿ ಗೆಲುವಿನ ನಗು ಬೀರಿತು. ಈ ಮೂಲಕ  ಮೂರು ಪಂದ್ಯಗಳ ಸರಣಿಯಲ್ಲಿ1-1 ರಲ್ಲಿ ಸಮಬಲ ಸಾಧಿಸಿದೆ. ಅಂತಿಮ ಪಂದ್ಯ ಬುಧವಾರ ನಡೆಯಲಿದೆ.

ADVERTISEMENT

ಎರಡನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಲೆವಿ ಕಿವೀಸ್ ತಂಡದ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಟ್ವೆಂಟಿ-20 ಕ್ರಿಕೆಟ್‌ನ ಅತಿವೇಗದ ಶತಕ ಗಳಿಸಿ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ 50 ಎಸೆತಗಳಲ್ಲಿ ಶತಕ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಅತಿಹೆಚ್ಚು ಸಿಕ್ಸರ್ ಸಿಡಿಸಿದ ಶ್ರೇಯವನ್ನೂ ಲೆವಿ ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಕ್ರಿಸ್ ಗೇಲ್ (10 ಸಿಕ್ಸರ್) ಹೆಸರಿನಲ್ಲಿದ್ದ ದಾಖಲೆ ಮುರಿಯಿತು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಂಡ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 173 (ಮಾರ್ಟಿನ್ ಗುಪ್ಟಿಲ್ 47, ಬ್ರೆಂಡನ್ ಮೆಕ್ಲಮ್ 35, ಕೇನ್ ವಿಲಿಯ ಮ್ಸನ್ ಅಜೇಯ 28,   ಜೇಮ್ಸ ಫ್ರಾಂಕ್ಲಿನ್ 28, ಜೊಹಾನ್ ಬೋಥಾ 22ಕ್ಕೆ 1). ದಕ್ಷಿಣ ಆಫ್ರಿಕಾ: 16 ಓವರ್‌ಗಳಲ್ಲಿ 2 ವಿಕೆಟ್‌ಗೆ 174 (ರಿಚರ್ಡ್ ಲೆವಿ ಔಟಾಗದೆ 117, ಎಬಿ ಡಿವಿಲಿಯರ್ಸ್ ಔಟಾಗದೆ 39, ರಾಬ್ ನಿಕೋಲ್ 10ಕ್ಕೆ 1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 8 ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ರಿಚರ್ಡ್ ಲೆವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.