ADVERTISEMENT

ದಕ್ಷಿಣ ಆಫ್ರಿಕಾ- ಆಸೀಸ್ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:15 IST
Last Updated 14 ಫೆಬ್ರುವರಿ 2011, 18:15 IST

ಬೆಂಗಳೂರು: ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋಲು ಅನುಭವಿಸಿದ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್‌ಗೆ ಮುನ್ನ ಫಾರ್ಮ್ ಕಂಡುಕೊಳ್ಳಲು ಮತ್ತೊಂದು ಅವಕಾಶ ಲಭಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳ ವಾರ ನಡೆಯುವ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಬಳಗ ದಕ್ಷಿಣ ಅಫ್ರಿಕಾ ತಂಡದ ಸವಾಲನ್ನು ಎದುರಿಸಲಿದೆ. ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಎರಡು ಬಲಿಷ್ಠ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ತಂಡ ಮಹೇಂದ್ರ ಸಿಂಗ್ ದೋನಿ ಬಳಗದ ಕೈಯಲ್ಲಿ 38 ರನ್‌ಗಳ ಸೋಲು ಅನುಭವಿಸಿತ್ತು. ಇದರಿಂದ ಆಸ್ಟ್ರೇಲಿಯಾದ ಸಿದ್ಧತೆಗೆ ಅಲ್ಪ ಹಿನ್ನಡೆ ಉಂಟಾದದ್ದು ನಿಜ. ಗೆಲುವಿಗೆ 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಕಾಂಗರೂ ನಾಡಿನವರು ಉತ್ತಮ ಆರಂಭ ಪಡೆದಿದ್ದರು. ಬಳಿಕ ಭಾರತದ ಸ್ಪಿನ್ ಆಕ್ರಮಣದ ಮುಂದೆ ಎಡವಿ 176 ರನ್‌ಗಳಿಗೆ ಆಲೌಟಾಗಿದ್ದರು.

ಸೋಲು ಅನುಭವಿಸಿದರೂ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೆಲವೊಂದು ಧನಾತ್ಮಕ ಅಂಶಗಳನ್ನು ಕಂಡುಕೊಂಡಿದೆ. ಪಾಂಟಿಂಗ್ ಮತ್ತು ಬ್ರೆಟ್ ಲೀ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮೈಕಲ್ ಕ್ಲಾರ್ಕ್ ಅವರ ಕಳಪೆ ಫಾರ್ಮ್ ಮುಂದುವರಿದಿ ರುವುದು ಆಸೀಸ್ ಚಿಂತೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಅವರಿಗೆ ಸಾಮರ್ಥ್ಯ ತೋರಿಸಲು ಕೊನೆಯ ಅವಕಾಶ ಕಲ್ಪಿಸಿಕೊಟ್ಟಿದೆ.

ಮತ್ತೊಂದೆಡೆ ಗ್ರೇಮ್ ಸ್ಮಿತ್ ಪಡೆ ಚೆನ್ನೈನಲ್ಲಿ ನಡೆದ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಎದುರಾಳಿ ತಂಡವನ್ನು ಕೇವಲ 152 ರನ್‌ಗಳಿಗೆ ನಿಯಂತ್ರಿಸಿ 23.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತ್ತು. ಆದರೆ ಆಸ್ಟ್ರೇಲಿಯಾ ತಂಡ ಕ್ಕೆ ಹೋಲಿಸಿದರೆ ಜಿಂಬಾಬ್ವೆ ದುರ್ಬಲ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಈ ಕಾರಣ ಸ್ಮಿತ್ ಬಳಗಕ್ಕೆ ಮಂಗಳವಾರ ನಿಜವಾದ ಪರೀಕ್ಷೆ ಎದುರಾಗಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿಲ್ಲ ಎಂದು ಭಾನುವಾರದ ಪಂದ್ಯದ ಬಳಿಕ ಆಸೀಸ್ ನಾಯಕ ರಿಕಿ ಪಾಂಟಿಂಗ್ ಹೇಳಿದ್ದರು. ‘ವಿಶ್ವಕಪ್ ಟೂರ್ನಿಯ ಪಂದ್ಯಗಳ ವೇಳೆ ಈ ರೀತಿಯ ಪಿಚ್ ಲಭಿಸದು ಎಂಬ ವಿಶ್ವಾಸ ನನ್ನದು’ ಎಂದು ದೋನಿ ಪ್ರತಿಕ್ರಿಯಿಸಿದ್ದರು. ಈ ಕಾರಣ ಆಸೀಸ್- ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಪಿಚ್ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

ತಂಡಗಳು
ದಕ್ಷಿಣ ಅಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಹಾಶಿಮ್ ಆಮ್ಲಾ, ಜಾಕ್ ಕಾಲಿಸ್, ಜಾನ್ ಬೋಥಾ, ಎಬಿ ಡಿವಿಲಿಯರ್ಸ್, ಜೀನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಕಾಲಿನ್ ಇನ್‌ಗ್ರಾಮ್, ಜಾಕ್ ಕಾಲಿಸ್, ಮಾರ್ನ್ ಮಾರ್ಕೆಲ್, ವೇಯ್ನಾ ಪಾರ್ನೆಲ್, ರಾಬಿನ್ ಪೀಟರ್‌ಸನ್, ಡೇಲ್ ಸ್ಟೇನ್, ಲೊನ್‌ವಾಬೊ ತ್ಸೊತ್ಸೊಬೆ, ಮಾರ್ನ್ ವಾನ್ ವಿಕ್.

ಆಸ್ಟ್ರೇಲಿಯಾ: ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಕ್ಯಾಮರೂನ್ ವೈಟ್, ಕಾಲಮ್ ಫರ್ಗ್ಯುಸನ್, ಡೇವಿಡ್ ಹಸ್ಸಿ, ಟಿಮ್ ಪೈನ್, ಸ್ಟೀನ್ ಸ್ಮಿತ್, ಜಾನ್ ಹೇಸ್ಟಿಂಗ್ಸ್, ಮಿಷೆಲ್ ಜಾನ್ಸನ್, ಜಾಸನ್ ಕ್ರೇಜಾ, ಬ್ರೆಟ್ ಲೀ, ಡಗ್ ಬೋಲಿಂಜರ್, ಶಾನ್ ಟೇಟ್.
ಪಂದ್ಯ: ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT