ADVERTISEMENT

ದಕ್ಷಿಣ ಆಫ್ರಿಕಾ ಜಯಭೇರಿ; ಸರಣಿ ಗೆಲುವು

ಏಜೆನ್ಸೀಸ್
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ದಕ್ಷಿಣ ಆಫ್ರಿಕಾ ಜಯಭೇರಿ; ಸರಣಿ ಗೆಲುವು
ದಕ್ಷಿಣ ಆಫ್ರಿಕಾ ಜಯಭೇರಿ; ಸರಣಿ ಗೆಲುವು   

ಜೊಹಾನ್ಸ್‌ಬರ್ಗ್‌: ಚುರುಕಾದ ಬೌಲಿಂಗ್ ದಾಳಿ ನಡೆಸಿದ ಮಧ್ಯಮವೇಗಿ ವೆರ್ನಾನ್ ಫಿಲಾಂಡರ್‌ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಗೆ ಪೆಟ್ಟು ನೀಡಿದರು.

ಅವರ ಪರಿಣಾಮಕಾರಿ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 492 ರನ್‌ಗಳಿಂದ ಗೆದ್ದಿತು. ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯನ್ನು 3–1ರಿಂದ ತನ್ನದಾಗಿಸಿಕೊಂಡಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ನಾಲ್ಕನೇ ಅತಿದೊಡ್ಡ ಗೆಲುವು.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 612 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 119 ರನ್‌ಗಳಿಗೆ ಪತನಗೊಂಡಿತು. ಸೋಮವಾರ 88 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾದ ಇತರ ಬ್ಯಾಟ್ಸ್‌ಮನ್‌ಗಳನ್ನು ದಿನದಾಟದ ಮೊದಲ ಅವಧಿಯಲ್ಲೇ ವಾಪಸ್ ಕಳುಹಿಸುವಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ತಂಡವು ತನ್ನ ತವರಿನಲ್ಲಿ 1970ರ ನಂತರ ಆಸ್ಟ್ರೇಲಿಯಾ ಸರಣಿ ಗೆದ್ದ ಸಾಧನೆ ಮಾಡಿತು.

ADVERTISEMENT

ದಿನದ ಮೊದಲ ಓವರ್‌ನಲ್ಲೇ ಶಾನ್‌ ಮಾರ್ಷ್‌ ಅವರ ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡಕ್ಕೆ ಫಿಲಾಂಡರ್ ನಿರಾಸೆ ಮೂಡಿಸಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಮಿಷೆಲ್ ಮಾರ್ಷ್‌ ವಿಕೆಟ್ ಪಡೆಯುವ ಮೂಲಕ ಫಿಲಾಂಡರ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 200ನೇ ವಿಕೆಟ್ ಗಳಿಸಿದರು. ಫೀಟರ್ ಹ್ಯಾಂಡ್ಸ್‌ಕಂಬ್ ಅವರನ್ನು ಬಿಟ್ಟರೆ ಇತರ ಯಾರಿಗೂ ಎರಡಂಕಿ ಮೊತ್ತ ತಲುಪಲು ಆಗಲಿಲ್ಲ. ನೇಥನ್ ಲಿಯಾನ್‌ ರನ್ ಔಟ್ ಆದದ್ದು ಬಿಟ್ಟರೆ ದಿನದಾಟದಲ್ಲಿ ಇತರ ಎಲ್ಲ ವಿಕೆಟ್‌ಗಳು ಫಿಲಾಂಡರ್ ಪಾಲಾದವು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 488; ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 221; ದಕ್ಷಿಣ ಆಫ್ರಿಕಾ, ಎರಡನೇ ಇನಿಂಗ್ಸ್‌: 6ಕ್ಕೆ344 ಡಿಕ್ಲೇರ್‌; ಆಸ್ಟ್ರೇಲಿಯಾ, ಎರಡನೇ ಇನಿಂಗ್ಸ್‌ (ಸೋಮವಾರದ ಅಂತ್ಯಕ್ಕೆ 3ಕ್ಕೆ88): 46.4 ಓವರ್‌ಗಳಲ್ಲಿ 119ಕ್ಕೆ ಆಲೌಟ್‌ (ಜೆ.ಬರ್ನ್ಸ್‌ 42, ಪೀಟರ್‌ ಹ್ಯಾಂಡ್ಸ್‌ಕಂಬ್‌ 24; ವೆರ್ನಾನ್ ಫಿಲಾಂಡರ್‌ 21ಕ್ಕೆ6, ಮಾರ್ನ್ ಮಾರ್ಕೆಲ್‌ 28ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾಗೆ 492 ರನ್‌ಗಳ ಜಯ, 3–1ರಿಂದ ಸರಣಿ ಗೆಲುವು. ಪಂದ್ಯಶ್ರೇಷ್ಠ: ವೆರ್ನಾನ್ ಫಿಲಾಂಡರ್‌, ಸರಣಿಯ ಶ್ರೇಷ್ಠ ಆಟಗಾರ: ಕಗಿಸೊ ರಬಾಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.