ADVERTISEMENT

ದಕ್ಷಿಣ ಆಫ್ರಿಕಾ-ಪಾಕ್ ಇಂದು ಪೈಪೋಟಿ

ಚಾಂಪಿಯನ್ಸ್ ಟ್ರೋಫಿ: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಉಭಯ ತಂಡಗಳು

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಬರ್ಮಿಂಗ್‌ಹ್ಯಾಮ್ (ಪಿಟಿಐ): ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಪೈಪೋಟಿ ನಡೆಸಲಿದ್ದು, ಉಭಯ ತಂಡಗಳೂ ಗೆಲುವಿನ ಒತ್ತಡದಲ್ಲಿವೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ಎದುರು ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಪಾಕಿಸ್ತಾನ ನಿರಾಸೆ ಆನುಭವಿಸಿತ್ತು. ಆದ್ದರಿಂದ ಟೂರ್ನಿಯ ಮುಂದಿನ ಹಂತ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಉಭಯ ತಂಡಗಳಿಗೂ ಗೆಲುವು ಮಹತ್ವವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್ ಕೇವಲ 170 ರನ್‌ಗೆ ಆಲ್‌ಔಟ್ ಆಗಿತ್ತು. ಆದ್ದರಿಂದ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕಿದೆ. ಉಭಯ ತಂಡಗಳು ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ ಪಾಕ್ ಅರು ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಭಾರತ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 300ಕ್ಕೂ ಅಧಿಕ ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆದರೆ, ಎ.ಬಿ. ಡಿವಿಲಿಯರ್ಸ್ ಬಳಗ ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಿಂದ ಬಳಲುತ್ತಿದೆ. ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಮಾರ್ನೆ ಮಾರ್ಕೆಲ್ ಟೂರ್ನಿಯಿಂದ `ಔಟ್' ಆಗಿದ್ದಾರೆ. ಇನ್ನೊಬ್ಬ ಪ್ರಭಾವಿ ಬೌಲರ್ ಡೇಲ್ ಸ್ಟೈನ್ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರು ಈ ಪಂದ್ಯದಲ್ಲಿ ಆಡುವುದು ಖಚಿತವಿಲ್ಲ.

`ಡೇನ್ ಸ್ಟೈನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಅವರು ಬೌಲಿಂಗ್ ಅಭ್ಯಾಸ ಆರಂಭಿಸಲಿದ್ದಾರೆ' ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್ ಮಹಮ್ಮದ್ ಮೂಸಾಜೀ ಹೇಳಿದ್ದಾರೆ. ಮಾರ್ಕೆಲ್ ಬದಲು ಬಂದಿರುವ ಕ್ರಿಸ್ ಮೊರಿಸ್ ಪಾಕ್ ವಿರುದ್ಧ ಪಂದ್ಯವನ್ನಾಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.

`ಚೇತರಿಸಿಕೊಳ್ಳುತ್ತಿರುವ ಸ್ಟೈನ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರಲ್ಲಿ ಫಿಟ್‌ನೆಸ್ ಕೊರತೆ ಕಾಣುತ್ತಿದೆ. ಆದರೂ, ಚೇತರಿಸಿಕೊಂಡು ಅವರು ಸೋಮವಾರ ಕಣಕ್ಕಿಯಲಿದ್ದಾರೆ ಎನ್ನುವ ನಿರೀಕ್ಷೆಯಿದೆ' ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಎ.ಬಿ. ಡಿವಿಲಿಯರ್ಸ್ ಹೇಳಿದರು.

ಪಾಕ್ ತಂಡ ಗಾಯಾದ ಸಮಸ್ಯೆಯಿಂದ ಮುಕ್ತವಾಗಿದ್ದು ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕಾದ ಸವಾಲು ಈ ತಂಡದ ಮುಂದಿದೆ. ಹಿಂದಿನ ಪಂದ್ಯದಲ್ಲಿ ನಾಯಕ ಮಿಸ್ಬಾ 96 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಆದರೆ, ಆರಂಭಿಕ ಆಟಗಾರ ಇಮ್ರಾನ್ ಫರ‌್ಹಾತ್, ಮಹಮ್ಮದ್ ಹಫೀಜ್ ಮತ್ತು ಅಸಾದ್ ಶಫೀಕ್ ಎರಡಂಕಿಯ ಮೊತ್ತ ಮುಟ್ಟಿರಲಿಲ್ಲ. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಅಮೋಘವಾಗಿ ಚೇತರಿಕೆ ಕಂಡಿತ್ತು. ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ನಾಸೀರ ಜಮ್‌ಷೇದ್ ಕೂಡಾ ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಬೇಕಿದೆ. ಅಂದಾಗ ಮಾತ್ರ 1998ರ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಲು ಸಾಧ್ಯ.

ಇಂದಿನ ಪಂದ್ಯ: ದಕ್ಷಿಣ ಆಫ್ರಿಕಾ-ಪಾಕಿಸ್ತಾನ
ಸಂಜೆ: ಸಂಜೆ 5.30 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.