ADVERTISEMENT

ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ : ಮುನ್ನಡೆಯಲ್ಲಿ ಚಿಕ್ಕರಂಗಪ್ಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST
ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ : ಮುನ್ನಡೆಯಲ್ಲಿ ಚಿಕ್ಕರಂಗಪ್ಪ
ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ : ಮುನ್ನಡೆಯಲ್ಲಿ ಚಿಕ್ಕರಂಗಪ್ಪ   

ಬೆಂಗಳೂರು: ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಎಸ್. ಚಿಕ್ಕರಂಗಪ್ಪ ಅವರು ಇಲ್ಲಿ ಆರಂಭವಾದ `ಟೊಯೋಟ ಕೊರೊಲಾ ಆಲ್ಟಿಸ್~ ದಕ್ಷಿಣ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಮುನ್ನಡೆ ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಮಂಗಳವಾರ ನಿಖರ ಆಟ ತೋರಿದ ಸ್ಥಳೀಯ ಪ್ರತಿಭೆ ಚಿಕ್ಕರಂಗಪ್ಪ ಎರಡು ಕಡಿಮೆ ಸ್ಟ್ರೋಕ್‌ಗಳನ್ನು (70) ಬಳಸಿಕೊಂಡು ಸ್ಪರ್ಧೆ ಕೊನೆಗೊಳಿಸಿದರು.

ದೆಹಲಿಯ ಗಗನ್ ವರ್ಮಾ (72) ಅವರು ಎರಡನೇ ಸ್ಥಾನದಲ್ಲಿದ್ದಾರೆ. ದೆಹಲಿಯವರೇ ಆದ ಸೌರಭ್ ಬಹುಗುಣ (73) ಮೂರನೇ ಸ್ಥಾನದೊಂದಿಗೆ ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಿದರು.

`ಮೊದಲ ದಿನ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದೇನೆ. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯವಾದದ್ದು ಇದಕ್ಕೆ ಕಾರಣ. ಮುಂದಿನ ಸುತ್ತುಗಳಲ್ಲಿ ಇಂತಹದೇ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸ ಹೊಂದಿದ್ದೇನೆ~ ಎಂದು ಚಿಕ್ಕರಂಗಪ್ಪ ಪ್ರತಿಕ್ರಿಯಿಸಿದರು.

ಉದಯನ್ ಮಾನೆ, ಕಾನಿಷ್ಕ್ ಮದನ್, ಅಶ್ಬೀರ್ ಸಿಂಗ್ ಸೈನಿ ಮತ್ತು ಸಮರ್‌ಜೀತ್ (ತಲಾ 74) ಅವರು ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಇನ್ನೊಬ್ಬ ಯುವ ಪ್ರತಿಭೆ ತ್ರಿಶೂಲ್ ಚಿನ್ನಪ್ಪ (79) ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಖಾಲಿನ್ ಜೋಷಿ (75) ಅವರು ಇತರ ಒಂಬತ್ತು ಸ್ಪರ್ಧಿಗಳೊಂದಿಗೆ ಜಂಟಿ ಐದನೇ ಸ್ಥಾನದಲ್ಲಿದ್ದಾರೆ.
ಕಣದಲ್ಲಿರುವ 84 ಸ್ಪರ್ಧಿಗಳಲ್ಲಿ ಹೆಚ್ಚಿನವರು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯಾಸಪಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.