ADVERTISEMENT

ದಕ್ಷಿಣ ವಲಯಕ್ಕೆ ದುಲೀಪ್ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 17:15 IST
Last Updated 5 ಫೆಬ್ರುವರಿ 2011, 17:15 IST
ದಕ್ಷಿಣ ವಲಯಕ್ಕೆ ದುಲೀಪ್ ಟ್ರೋಫಿ
ದಕ್ಷಿಣ ವಲಯಕ್ಕೆ ದುಲೀಪ್ ಟ್ರೋಫಿ   

ವಿಶಾಖಪಟ್ಟಣ: ಅಭಿನವ್ ಮುಕುಂದ್ ಅವರ ಅಜೇಯ (64) ರನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಅಭಿಮನ್ಯು ಮಿಥುನ್ ಅವರ ಕರಾರುವಕ್ಕಾದ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ವಲಯ ತಂಡದವರು ಇಲ್ಲಿ ಮುಕ್ತಾಯವಾದ ಉತ್ತರ ವಲಯ ವಿರುದ್ಧದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಎರಡನೇ ಇನಿಂಗ್ಸ್‌ನಲ್ಲಿ ಉತ್ತರ ವಲಯ 88.5 ಓವರ್‌ಗಳಲ್ಲಿ 317 ರನ್ ಗಳಿಸಿ ಆಲ್‌ಔಟ್ ಆಯಿತು. ಅಲ್ಪ ಮೊತ್ತದ ಮುನ್ನಡೆ ಸಾಧಿಸಿದ್ದ ಉತ್ತರ ವಲಯಕ್ಕೆ ತಕ್ಕ ಉತ್ತರ ನೀಡಿದ ದಕ್ಷಿಣ ವಲಯ 23.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ ಗಳಿಸಿದ್ದ 50 ರನ್‌ಗಳಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಉತ್ತರ ವಲಯದ ಆಟಗಾರರನ್ನು ಬಹಳ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅಭಿಮನ್ಯು ಮಿಥುನ್, ಪ್ರಗ್ಯಾನ್ ಒಜಾ ಹಾಗೂ ಎಸ್. ಅರವಿಂದ್ ಬಿಡಲಿಲ್ಲ. ಇವರು ತಲಾ ಮೂರು ವಿಕೆಟ್ ಪಡೆದು ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ವಲಯ ಅಭಿನವ್ ಮುಕುಂದ್ (64) ಹಾಗೂ ರಾಬಿನ್ ಉತ್ತಪ್ಪ (71) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇನ್ನೂ ಏಳು ವಿಕೆಟ್‌ಗಳು ಬಾಕಿ ಇರುವಾಗಲೇ ಗೆಲುವನ್ನು ತನ್ನದಾಗಿಸಿಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 100 ರನ್‌ಗಳ ಕಾಣಿಕೆ ನೀಡಿದ ಆರಂಭಿಕ ಆಟಗಾರರು ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್: ಉತ್ತರ ವಲಯ ಮೊದಲ ಇನಿಂಗ್ಸ್ 337 ಮತ್ತು ಎರಡನೇ ಇನಿಂಗ್ಸ್ 88.5 ಓವರ್‌ಗಳಲ್ಲಿ 317. (ನಿತಿನ್ ಸೈನಿ 65, ಮಿಥುನ್ ಮನ್‌ಹಾಸ್ 79, ಪಾರಸ್ ಡೋಗ್ರಾ 44, ಯಶ್‌ಪಾಲ್ ಸಿಂಗ್ 42, ಅಮಿತ್ ಮಿಶ್ರಾ 30; ಅಭಿನವ್ ಮಿಥುನ್ 42ಕ್ಕೆ3, ಪ್ರಗ್ಯಾನ್ ಒಜಾ 94ಕ್ಕೆ3, ಎಸ್.ಅರವಿಂದ್ 76ಕ್ಕೆ3) ದಕ್ಷಿಣ ವಲಯ ಮೊದಲ ಇನಿಂಗ್ಸ್ 477 ಮತ್ತು ಎರಡನೇ ಇನಿಂಗ್ಸ್ 23.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178. (ಅಭಿನವ್ ಮುಕುಂದ್ ಅಜೇಯ 64, ರಾಬಿನ್ ಉತ್ತಪ್ಪ 71, ಮನೀಷ್ ಪಾಂಡೆ 37; ಸುಮಿತ್ ನರ್ವಾಲ್ 38ಕ್ಕೆ1, ಯಶ್‌ಪಾಲ್ ಸಿಂಗ್ 40ಕ್ಕೆ2)
ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು
ಪಂದ್ಯ ಪುರುಷೋತ್ತಮ: ಎಸ್. ಬದರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.