ADVERTISEMENT

ದಾಖಲೆ ಬರೆದ ಮನು: ಚಿನ್ನ ಗೆದ್ದ ಪೂನಮ್‌

ಪಿಟಿಐ
Published 8 ಏಪ್ರಿಲ್ 2018, 19:47 IST
Last Updated 8 ಏಪ್ರಿಲ್ 2018, 19:47 IST
ದಾಖಲೆ ಬರೆದ ಮನು: ಚಿನ್ನ ಗೆದ್ದ ಪೂನಮ್‌
ದಾಖಲೆ ಬರೆದ ಮನು: ಚಿನ್ನ ಗೆದ್ದ ಪೂನಮ್‌   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ನಾಲ್ಕನೆ ದಿನವಾದ ಭಾನುವಾರ ಭಾರತದ ಶೂಟರ್‌ಗಳು ಮೋಡಿ ಮಾಡಿದರು. ವೇಟ್‌ಲಿಫ್ಟರ್‌ಗಳೂ ಪ್ರಾಬಲ್ಯ ಮುಂದುವರಿಸಿದರು.

ಶೂಟಿಂಗ್‌ನಲ್ಲಿ ಭಾರತದ ಖಾತೆಗೆ ಮೂರು ಪದಕ ಸೇರ್ಪಡೆಯಾಗಿದ್ದು, ವೇಟ್‌ಲಿಫ್ಟರ್‌ಗಳು ಎರಡು ಪದಕ ಗೆದ್ದು ಗಮನ ಸೆಳೆದರು.

ಮಹಿಳೆಯರ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಮನು ಭಾಕರ್‌ (240.9 ಪಾ.) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ADVERTISEMENT

(ಹೀನಾ ಸಿಧು)

ಹೋದ ತಿಂಗಳು ನಡೆದಿದ್ದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಎರಡು ಚಿನ್ನ ಗೆದ್ದು ಗಮನ ಸೆಳೆದಿದ್ದ ಮನು, ಗೋಲ್ಡ್‌ ಕೋಸ್ಟ್‌ನ ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರದಲ್ಲೂ ಚಿನ್ನದ ಬೇಟೆಯಾಡಿದರು.

ಮೊದಲ ಬಾರಿಗೆ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿರುವ 16 ವರ್ಷದ ಮನು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

40 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ 388 ಪಾಯಿಂಟ್ಸ್‌ ಗಳಿಸಿದ ಮನು, ಆಸ್ಟ್ರೇಲಿಯಾದ ದಿನಾ ಅಸಪಾಂಡಿಯಾರೊವಾ ಹೆಸರಿನಲ್ಲಿದ್ದ ಕೂಟ ದಾಖಲೆ ಅಳಿಸಿ ಹಾಕಿದ್ದರು. ದಿನಾ, 2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕೂಟದ ಅರ್ಹತಾ ಸುತ್ತಿನಲ್ಲಿ 386 ಪಾಯಿಂಟ್ಸ್‌ ಗಳಿಸಿ ದಾಖಲೆ ಬರೆದಿದ್ದರು.

ಹರಿಯಾಣದ ಜಜ್ಜಾರ್‌ ಜಿಲ್ಲೆಯವರಾದ ಮನು, ಫೈನಲ್‌ನಲ್ಲೂ ನಿಖರವಾಗಿ ಗುರಿ ಹಿಡಿದು ಕೂಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಮೊದಲ ಹಂತದ ಮೊದಲ ಐದು ಅವಕಾಶಗಳಲ್ಲಿ ಕ್ರಮವಾಗಿ 10.1, 10.0, 9.9, 10.5 ಮತ್ತು 10.4 ಪಾಯಿಂಟ್ಸ್‌ ಗಳಿಸಿದ ಭಾಕರ್‌, ಎರಡನೆ ಅವಕಾಶದಲ್ಲೂ ಪ್ರಾಬಲ್ಯ ಮೆರೆದು ಒಟ್ಟು ಪಾಯಿಂಟ್ಸ್‌ ಅನ್ನು 101.5ಕ್ಕೆ ಹೆಚ್ಚಿಸಿಕೊಂಡರು.

(ರವಿಕುಮಾರ್)

ಎರಡನೆ ಹಂತದ ಎಲಿಮಿನೇಷನ್‌ನಲ್ಲೂ ಮನು, ನಿಖರ ಗುರಿ ಹಿಡಿದು ಗಮನ ಸೆಳೆದರು. ಮೊದಲ ಅವಕಾಶದಲ್ಲಿ 9.6 ಮತ್ತು 9.9 ಪಾಯಿಂಟ್ಸ್‌ ದಾಖಲಿಸಿದ ಅವರು ಎರಡನೆ ಅವಕಾಶದ ಎರಡು ಶಾಟ್‌ಗಳಲ್ಲಿ 10.8 ಮತ್ತು 9.7 ಪಾಯಿಂಟ್ಸ್‌ ಹೆಕ್ಕಿದರು. ಹೀಗಾಗಿ ಒಟ್ಟು ಪಾಯಿಂಟ್ಸ್‌ 141.5ಕ್ಕೆ ಹೆಚ್ಚಿತು.

ನಂತರದ ಐದು ಅವಕಾಶಗಳಲ್ಲೂ ಸುಲಭವಾಗಿ ಪಾಯಿಂಟ್ಸ್‌ ಕಲೆಹಾಕಿ ಮುನ್ನಡೆ ಕಾಯ್ದುಕೊಂಡ ಭಾಕರ್‌, ಖುಷಿಯ ಕಡಲಲ್ಲಿ ತೇಲಿದರು.

ಭಾರತದ ಅನುಭವಿ ಶೂಟರ್‌ ಹೀನಾ ಸಿಧು, ಈ ವಿಭಾಗದ ಬೆಳ್ಳಿ ತಮ್ಮದಾಗಿಸಿಕೊಂಡರು.

ಅರ್ಹತಾ ಸುತ್ತಿನಲ್ಲಿ 379 ಪಾಯಿಂಟ್ಸ್‌ ಗಳಿಸಿದ್ದ ಹೀನಾ, ಫೈನಲ್‌ನಲ್ಲಿ ಒಟ್ಟು 234.0 ಪಾಯಿಂಟ್ಸ್‌ ಕಲೆಹಾಕಿದರು.

ಮೊದಲ ಹಂತದ ಸ್ಪರ್ಧೆಯ ಅಂತ್ಯಕ್ಕೆ ಹೀನಾ ಖಾತೆಯಲ್ಲಿ 95.5 ಪಾಯಿಂಟ್ಸ್‌ ಇದ್ದವು. ಎರಡನೆ ಹಂತದ ಎಲಿಮಿನೇಷನ್‌ ಸುತ್ತಿನಲ್ಲೂ ಏಕಾಗ್ರತೆ ಕಾಪಾಡಿಕೊಂಡ ಹೀನಾ, 14 ಶಾಟ್‌ಗಳಲ್ಲೂ ನಿಖರ ಗುರಿ ಹಿಡಿದು ಪಾಯಿಂಟ್ಸ್‌ ಕಲೆಹಾಕಿದರು.

ಆಸ್ಟ್ರೇಲಿಯಾದ ಎಲೆನಾ ಗಲಿಯಾಬೊವಿಚ್‌ (214.9 ಪಾಯಿಂಟ್ಸ್‌) ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಒಟ್ಟು ಎಂಟು ಮಂದಿ ಶೂಟರ್‌ಗಳು ಭಾಗವಹಿಸಿದ್ದರು.

ರವಿಗೆ ಕಂಚು: ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಕಣದಲ್ಲಿದ್ದ ರವಿಕುಮಾರ್‌ ಕಂಚಿನ ಸಾಧನೆ ಮಾಡಿದರು. ಅವರು 224.1 ಪಾಯಿಂಟ್ಸ್‌ ಕಲೆಹಾಕಿ ಮೂರನೆ ಸ್ಥಾನದಲ್ಲಿ ಕಾಣಿಸಿಕೊಂಡರು.

ಮೊದಲ ಹಂತದ ಮೊದಲ ಅವಕಾಶದಲ್ಲಿ 49.6 ಪಾಯಿಂಟ್ಸ್‌ ಗಳಿಸಿದ ಅವರು ಎರಡನೆ ಅವಕಾಶದಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿ ಒಟ್ಟು ಪಾಯಿಂಟ್ಸ್‌ ಅನ್ನು 100.5ಕ್ಕೆ ಹೆಚ್ಚಿಸಿಕೊಂಡರು.

ಎರಡನೆ ಹಂತದ ಎಲಿಮಿನೇಷನ್‌ ಸುತ್ತಿನಲ್ಲೂ ರವಿಕುಮಾರ್‌ ಮೋಡಿ ಮಾಡಿದರು. ಪ್ರತಿ ಶಾಟ್‌ನಲ್ಲೂ 10.1, 10.4, 10.8ಕ್ಕೆ ಗುರಿ ಇಡುತ್ತಿದ್ದ ಅವರು ಅಂತಿಮವಾಗಿ 224.1 ಪಾಯಿಂಟ್ಸ್‌ ಸಂಗ್ರಹಿಸಿದರು.

ಆಸ್ಟ್ರೇಲಿಯಾದ ಡೇನ್‌ ಸ್ಯಾಂಪ್ಸನ್‌, ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಅವರು 245.0 ಪಾಯಿಂಟ್ಸ್ ಸಂಗ್ರಹಿಸಿದರು.

ಬಾಂಗ್ಲಾದೇಶದ ಅಬ್ದುಲ್ಲಾ ಹಲ್‌ ಬಕಿ ಈ ವಿಭಾಗದ ಬೆಳ್ಳಿಗೆ ಕೊರಳೊಡ್ಡಿದರು. ಅಬ್ದುಲ್ಲಾ ಅವರು 244.7 ಪಾಯಿಂಟ್ಸ್‌ ಕಲೆಹಾಕಿದರು.

ಭಾರತದ ದೀಪಕ್‌ ಕುಮಾರ್‌ ಆರನೆಯವರಾಗಿ ಸ್ಪರ್ಧೆ ಮುಗಿಸಿದರು. ಅವರು 162.3 ಪಾಯಿಂಟ್ಸ್‌ ಗಳಿಸಿದರು.

ಸಾನಿಯಾಗೆ ನಾಲ್ಕನೆ ಸ್ಥಾನ: ಮಹಿಳೆಯರ ಸ್ಕೀಟ್‌ ವಿಭಾಗದಲ್ಲಿ ಭಾರತದ ಸಾನಿಯಾ ಶೇಖ್‌ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು.

ಫೈನಲ್‌ನಲ್ಲಿ ಸಾನಿಯಾ 32 ಪಾಯಿಂಟ್ಸ್‌ ಗಳಿಸಿದರು.

ಸೈಪ್ರಸ್‌ನ ಆ್ಯಂಡ್ರಿ ಎಲಿಫ್‌ತೆರಿಯು (52 ಪಾ.) ಚಿನ್ನದ ಸಾಧನೆ ಮಾಡಿದರು.

ಇಂಗ್ಲೆಂಡ್‌ನ ಅಂಬರ್‌ ಹಿಲ್‌ (49 ಪಾ.) ಮತ್ತು ಸೈಪ್ರಸ್‌ನ ಪನಾಗಿಯೊಟ ಆ್ಯಂಡ್ರೆಯು (40 ಪಾ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು

.

**

ಪೂನಮ್‌ ಮೋಡಿ

ವೇಟ್‌ಲಿಫ್ಟರ್‌ ಪೂನಮ್‌ ಯಾದವ್‌ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.

ಭಾನುವಾರ ನಡೆದ ಫೈನಲ್‌ನಲ್ಲಿ ಪೂನಮ್‌ ಒಟ್ಟು 222 ಕೆ.ಜಿ.ಭಾರ ಎತ್ತಿ ಗಮನ ಸೆಳೆದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಸ್ನ್ಯಾಚ್‌ನಲ್ಲಿ 100 ಕೆ.ಜಿ. ಭಾರ ಎತ್ತಿದ ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 122 ಕೆ.ಜಿ. ಸಾಮರ್ಥ್ಯ ತೋರಿದರು.

ಇಂಗ್ಲೆಂಡ್‌ನ ಸಾರಾ ಡೇವಿಸ್‌ (217 ಕೆ.ಜಿ) ಬೆಳ್ಳಿ ಜಯಿಸಿದರೆ, ಫಿಜಿ ದೇಶದ ಅಪೊಲೊನಿಯಾ ವೈವಯಿ (216 ಕೆ.ಜಿ) ಕಂಚು ತಮ್ಮದಾಗಿಸಿಕೊಂಡರು.

ಪೂನಮ್‌ 2014ರ ಗ್ಲಾಸ್ಗೊ ಕೂಟದಲ್ಲಿ ಕಂಚು ಜಯಿಸಿದ್ದರು. ಆಗ ಅವರು 63 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು.

ವಿಕಾಸ್‌ಗೆ ಕಂಚು: ಪುರುಷರ 94 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿದ್ದ ವಿಕಾಸ್‌ ಠಾಕೂರ್‌ ಕಂಚು ಗೆದ್ದರು.

ವಿಕಾಸ್‌ ಅವರು ಒಟ್ಟು 351 ಕೆ.ಜಿ. ಭಾರ ಎತ್ತಿದರು. ಪಪುವಾ ನ್ಯೂ ಗಿನಿಯ ಸ್ಟೀವನ್‌ ಕಾರಿ (370 ಕೆ.ಜಿ) ಚಿನ್ನ ತಮ್ಮದಾಗಿಸಿಕೊಂಡರು. ಕೆನಡಾದ ಬೊವಾಡಿ ಸ್ಯಾಂಟಾವಿ (369 ಕೆ.ಜಿ) ಬೆಳ್ಳಿ ಗೆದ್ದರು.

(ವಿಕಾಸ್‌ ಠಾಕೂರ್‌)

**

ಫಿಜಿ ದೇಶದ ಅಪೊಲೊನಿಯಾ ಅವರಿಂದ ಕಠಿಣ ಸ್ಪರ್ಧೆ ಎದುರಾಗಬಹುದೆಂದು ನಿರೀಕ್ಷಿಸಿದ್ದೆ. ಅವರು ಮತ್ತು ಇಂಗ್ಲೆಂಡ್‌ನ ಸಾರಾ, ಅಂತಿಮ ಅವಕಾಶದಲ್ಲಿ ವಿಫಲರಾಗಿದ್ದರಿಂದ ಚಿನ್ನ ಗೆಲ್ಲುವ ನನ್ನ ಕನಸು ಕೈಗೂಡಿತು.
-ಪೂನಮ್‌ ಯಾದವ್‌, ಭಾರತದ ವೇಟ್‌ ಲಿಫ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.