ADVERTISEMENT

ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ: ಪೇಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಬೆಂಗಳೂರು: ಇಂಡೊನೇಷ್ಯಾ ವಿರುದ್ಧದ ಪಂದ್ಯದೊಂದಿಗೆ ಡೇವಿಸ್ ಕಪ್‌ನಲ್ಲಿ `ಅರ್ಧಶತಕ' ಪೂರೈಸಲಿರುವ ಲಿಯಾಂಡರ್ ಪೇಸ್ ಇನ್ನಷ್ಟು ವರ್ಷ ಟೆನಿಸ್‌ನಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

`ನನಗೆ ಈಗಲೂ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇನ್ನೂ ಮೂರೂವರೆ ವರ್ಷ ಆಡಲು ಸಾಧ್ಯ' ಎಂದು 39 ವರ್ಷ ವಯಸ್ಸಿನ ಪೇಸ್ ಗುರುವಾರ ನಡೆದ ಡ್ರಾ ವೇಳೆ ತಿಳಿಸಿದರು. ಈ ಮೂಲಕ ಬ್ರೆಜಿಲ್‌ನಲ್ಲಿ 2016ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸೂಚನೆಯನ್ನು ಅವರು ನೀಡಿದರು.

`ಆಟದ ಮೇಲೆ ಪ್ರೀತಿ ಇರುವ ತನಕವೂ ಟೆನಿಸ್ ಆಡುತ್ತಲೇ ಇರುತ್ತೇನೆ. ಮುಂದಿನ ಒಲಿಂಪಿಕ್ಸ್‌ಗೆ ಮೂರು ವರ್ಷಗಳಿವೆ. ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥನಾಗಿದ್ದರೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಆಡದೇ ಇರುವುದಕ್ಕೆ ಯಾವುದೇ ಕಾರಣ ಇಲ್ಲ' ಎಂದರು.

ಇಂಡೊನೇಷ್ಯಾ ವಿರುದ್ಧದ ಪಂದ್ಯ ಪೇಸ್‌ಗೆ 50ನೇ ಡೇವಿಸ್ ಕಪ್ ಹೋರಾಟ ಎನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ಆಟಗಾರ `ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. ಇಷ್ಟು ವರ್ಷ ನನಗೆ ಆಡಲು ಅವಕಾಶ ಸಿಕ್ಕಿದೆ. ಈ ಹೋರಾಟವನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ' ಎಂದರು.

ವೃತ್ತಿಜೀವನದಲ್ಲಿ ಇದುವರೆಗಿನ ಅತ್ಯಂತ ಸ್ಮರಣೀಯ ಕ್ಷಣ ಯಾವುದು ಎಂಬ ಪ್ರಶ್ನೆ ಎದುರಾದಾಗ ಪೇಸ್, `1993 ರಲ್ಲಿ ಫ್ರಾನ್ಸ್ ವಿರುದ್ಧ ಫ್ರೆಜುಸ್‌ನಲ್ಲಿ ನಡೆದ ವಿಶ್ವಗುಂಪಿನ ಕ್ವಾರ್ಟರ್ ಫೈನಲ್ ಪಂದ್ಯ ನನಗೆ ವಿಶೇಷವಾದುದು. ಏಕೆಂದರೆ ಫ್ರಾನ್ಸ್ ವಿರುದ್ಧ ಭಾರತ ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅಂದು ಎದುರಾಳಿ ತಂಡದಲ್ಲಿ ಬಲಿಷ್ಠ ಆಟಗಾರರಿದ್ದರು. ಮಾತ್ರವಲ್ಲ, ಪಂದ್ಯ ಕ್ಲೇ ಕೋರ್ಟ್‌ನಲ್ಲಿ ನಡೆದಿತ್ತು. ನಮಗೆ ಅಂತಹ ಕೋರ್ಟ್‌ನಲ್ಲಿ ಆಡಿದ ಅನುಭವವೇ ಇರಲಿಲ್ಲ' ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.