ADVERTISEMENT

ದೇಶಿ ಕ್ರಿಕೆಟ್‌ನಲ್ಲಿ ಆಡಲು ಒಪ್ಪದ ಮಲಿಕ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 16:50 IST
Last Updated 19 ಫೆಬ್ರುವರಿ 2011, 16:50 IST

ಕರಾಚಿ (ಪಿಟಿಐ): ಭಾರತದ ಚಾನಲ್‌ವೊಂದರಲ್ಲಿ ಕ್ರಿಕೆಟ್ ವಿಶ್ಲೇಷಣೆಯ ಹೊಣೆಯನ್ನು ಹೊತ್ತುಕೊಂಡಿರುವ ಕಾರಣ ದೇಶಿ ಕ್ರಿಕೆಟ್‌ನಲ್ಲಿ ಆಡುವುದಿಲ್ಲವೆಂದು ಹೇಳಿರುವ ಮಾಜಿ ನಾಯಕ ಶೋಯಬ್ ಮಲಿಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನಗೊಂಡಿದೆ.

‘ಪೆಂಟ್ಯಾಂಗ್ಯೂಲರ್ ಕಪ್’ ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಪ್ರಾಂತ್ಯದ ನಾಯಕತ್ವ ವಹಿಸಿಕೊಳ್ಳಬೇಕೆಂದು ಪಿಸಿಬಿ ಹಾಗೂ ರಾಷ್ಟ್ರೀಯ ಆಯ್ಕೆಗಾರರು ಮಲಿಕ್‌ಗೆ ಕೇಳಿಕೊಂಡಿದ್ದರು. ಆದರೆ ತಾವು ವಿಶ್ವಕಪ್ ಮುಗಿಯುವವರೆಗೆ ಲಭ್ಯವಾಗುವುದಿಲ್ಲವೆಂದು ಶೋಯಬ್ ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಆಟಗಾರರೆಲ್ಲ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ತಂಡದಲ್ಲಿ ಇಲ್ಲದಿರುವವರು ವಿವಿಧ ಚಾನಲ್‌ಗಳಲ್ಲಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲಿಕ್ ಕೂಡ ಭಾರತದ ಚಾನಲ್‌ವೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ದರಿಂದ ‘ಪೆಂಟ್ಯಾಂಗ್ಯೂಲರ್ ಕಪ್’ ಕ್ರಿಕೆಟ್ ಟೂರ್ನಿಯು ಖ್ಯಾತ ಆಟಗಾರರು ಇಲ್ಲದೆ ಕಳೆಗುಂದುವ ಆತಂಕ ಕಾಡುತ್ತಿದೆ.

ಮಲಿಕ್ ಕೂಡ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಹೇಳಿರುವುದು ಪಿಸಿಬಿ ಕೆಂಡಾಮಂಡಲ ಆಗುವಂತೆ ಮಾಡಿದೆ. ದೇಶದಲ್ಲಿ ಕ್ರಿಕೆಟ್ ಆಡುವುದಕ್ಕಿಂತ ವಿದೇಶದ ಚಾನಲ್‌ನಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡುವುದೇ ಮಹತ್ವದ್ದೆಂದ ಮಲಿಕ್ ಪರಿಗಣಿಸಿದ್ದನ್ನು ರಾಷ್ಟ್ರೀಯ ಆಯ್ಕೆಗಾರರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.