ADVERTISEMENT

ದೋನಿ–ರೋಹಿತ್‌ ಮುಖಾಮುಖಿ

ಪಿಟಿಐ
Published 27 ಏಪ್ರಿಲ್ 2018, 19:47 IST
Last Updated 27 ಏಪ್ರಿಲ್ 2018, 19:47 IST
ದೋನಿ–ರೋಹಿತ್‌ ಮುಖಾಮುಖಿ
ದೋನಿ–ರೋಹಿತ್‌ ಮುಖಾಮುಖಿ   

ಪುಣೆ (ಪಿಟಿಐ): ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ತನ್ನ ಏಳನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ.

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ ಈ ಬಾರಿ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿದೆ. ಈ ತಂಡದ ಖಾತೆಯಲ್ಲಿ 10 ಪಾಯಿಂಟ್ಸ್‌ಗಳಿವೆ. ರೋಹಿತ್‌ ಶರ್ಮಾ ನೇತೃತ್ವದ ಮುಂಬೈ ಕೂಡ ಆರು ಪಂದ್ಯಗಳನ್ನು ಆಡಿದೆ. ಈ ತಂಡ ಐದರಲ್ಲಿ ಸೋತಿದೆ. ಶನಿವಾರದ ಪಂದ್ಯ ರೋಹಿತ್‌ ಪಡೆಯ ಪಾಲಿಗೆ ‘ಮಾಡು ಇಲ್ಲವೆ ಮಡಿ’ ಹೋರಾಟವಾಗಲಿದೆ.

ADVERTISEMENT

ಈ ತಿಂಗಳ ಆರಂಭದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ದೋನಿ ಪಡೆ
ಒಂದು ವಿಕೆಟ್‌ನಿಂದ ಗೆದ್ದಿತ್ತು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಮುಂಬೈ ತಂಡ ಸನ್ನದ್ಧವಾಗಿದೆ.‌

ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಸಿಲುಕಿ ಎರಡು ವರ್ಷ ನಿಷೇಧ ಶಿಕ್ಷೆ ಪೂರೈಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಬಾರಿ ಪರಿಣಾಮಕಾರಿ ಆಟದ ಮೂಲಕ ಗಮನ ಸೆಳೆದಿದೆ.

‌ಅಂಬಟಿ ರಾಯುಡು, ಸುರೇಶ್‌ ರೈನಾ, ಶೇನ್‌ ವಾಟ್ಸನ್‌ ಮತ್ತು ನಾಯಕ ದೋನಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ.

ರಾಯುಡು ಈ ಸಲ 47.16ರ ಸರಾಸರಿಯಲ್ಲಿ 283ರನ್‌ ದಾಖಲಿಸಿದ್ದಾರೆ. ದೋನಿ ಖಾತೆಯಲ್ಲಿ 209ರನ್‌ಗಳಿವೆ. ಆಸ್ಟ್ರೇಲಿಯಾದ ವಾಟ್ಸನ್‌ 191ರನ್‌ ಬಾರಿಸಿದ್ದಾರೆ. ಇವರು ಎಂಸಿಎ ಅಂಗಳದಲ್ಲೂ ರನ್‌ ಮಳೆ ಸುರಿಸಲು ಕಾಯುತ್ತಿದ್ದಾರೆ.

ಫಾಫ್‌ ಡು ಪ್ಲೆಸಿ, ಡ್ವೇನ್‌ ಬ್ರಾವೊ ಮತ್ತು ರವೀಂದ್ರ ಜಡೇಜ ಅವರೂ ಬಿರುಸಿನ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲಿ ದೀಪಕ್‌ ಚಾಹರ್‌ ತಂಡದ ಬೆನ್ನೆಲುಬಾಗಿದ್ದಾರೆ.

ಜಯದ ಹಾದಿಗೆ ಮರಳುವ ವಿಶ್ವಾಸ: ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್‌ ತಂಡ ಕೂಡ ಗೆಲುವಿಗಾಗಿ ಕಾತರಿಸುತ್ತಿದೆ.

ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ಕೀರನ್‌ ‍ಪೊಲಾರ್ಡ್‌ ಅವರು ರನ್‌ ಗಳಿಸಲು ಪರದಾಡುತ್ತಿರುವುದು ಈ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಪೊಲಾರ್ಡ್‌ ಬದಲು ಈ ಪಂದ್ಯದಲ್ಲಿ ಜೆ.ಪಿ.ಡುಮಿನಿ ಅಥವಾ ಎವಿನ್‌ ಲೂಯಿಸ್‌ಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ಕೃಣಾಲ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಉತ್ತಮ ಲಯದಲ್ಲಿದ್ದು ಸೂಪರ್‌ ಕಿಂಗ್ಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ.

ವೇಗಿಗಳಾದ ಮುಸ್ತಫಿಜರ್‌ ರೆಹಮಾನ್‌, ಮಿಷೆಲ್‌ ಮೆಕ್‌ಲೆನಾಗನ್‌ ಮತ್ತು ಸ್ಪಿನ್ನರ್‌ ಮಯಂಕ್‌ ಮಾರ್ಕಂಡೆ ಮಿಂಚುವ ತವಕದಲ್ಲಿದ್ದಾರೆ.

ಆರಂಭ: ರಾತ್ರಿ 8.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.