ADVERTISEMENT

ನಟರಾಜ್‌ ಶತಕ; ಪಂದ್ಯ ಡ್ರಾ

42ನೇ ವರ್ಷದಲ್ಲಿ ಮೊದಲ ರಣಜಿ ಪಂದ್ಯ ಆಡಿದ ತಾಂಬೆ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಮುಂಬೈಯಲ್ಲಿ ಬುಧವಾರ ಮುಕ್ತಾಯಗೊಂಡ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಗಳಿಸಿ ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದ ಒಡಿಶಾದ ನಟರಾಜ್‌ ಬೆಹೆರಾ ಬ್ಯಾಟಿಂಗ್‌ ವೈಖರಿ  	–ಪಿಟಿಐ ಚಿತ್ರ
ಮುಂಬೈಯಲ್ಲಿ ಬುಧವಾರ ಮುಕ್ತಾಯಗೊಂಡ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಗಳಿಸಿ ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದ ಒಡಿಶಾದ ನಟರಾಜ್‌ ಬೆಹೆರಾ ಬ್ಯಾಟಿಂಗ್‌ ವೈಖರಿ –ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಕಲೆ ಹಾಕಿದರೂ ಮುಂಬೈ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಒಡಿಶಾದ ನಟರಾಜ್‌ ಬೆಹೆರಾ ಕೊನೆಯ ದಿನದಾಟದಲ್ಲಿ ಶತಕ ಗಳಿಸಿ ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಟಾಸ್‌ ಗೆದ್ದು ಮುಂಬೈ ಮೊದಲು ಬ್ಯಾಟ್‌ ಮಾಡಿ 501 ರನ್‌ಗಳನ್ನು ಕಲೆ ಹಾಕಿತ್ತು. ಒಡಿಶಾ ಮೊದಲ ಇನಿಂಗ್ಸ್‌ ನಲ್ಲಿ 256 ರನ್‌ ಗಳಿಸಿ ಫಾಲೋ ಆನ್‌ ಸುಳಿಗೆ ಸಿಲುಕಿತ್ತು. ಇದರಿಂದ ವಾಸೀಂ ಜಾಫರ್‌ ಸಾರಥ್ಯದ ಮುಂಬೈ ತಂಡಕ್ಕೆ ಗೆಲುವಿನ ಆಸೆ ಚಿಗುರೊಡೆದಿತ್ತು. ಆದರೆ, ನಟರಾಜ್‌ (ಔಟಾಗದೆ 127, 218ಎಸೆತ, 17 ಬೌಂಡರಿ, 3 ಸಿಕ್ಸರ್‌) ಒಡಿಶಾದ ನೆರವಿಗೆ ನಿಂತರು. ಇನಿಂಗ್ಸ್‌ ಮುನ್ನಡೆ ಸಾಧಿಸಿದ ಜಾಫರ್‌ ಬಳಗ ಮೂರು ಪಾಯಿಂಟ್‌ಗಳನ್ನು ತನ್ನದಾಗಿ ಸಿ ಕೊಂಡರೆ, ಒಡಿಶಾ ಒಂದು ಅಂಕ ಪಡೆಯಿತು.

ಕುಸಿದ ಮುಂಬೈ:  ಈ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡ ಕಾರಣ ಮುಂಬೈ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿಯಿತು.
ಆರು ಪಂದ್ಯಗಳನ್ನು ಆಡಿರುವ ಆತಿಥೇಯರು ಮೂರು ಗೆಲುವು ಮತ್ತು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಒಟ್ಟು 23 ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಆದರೆ, ಕರ್ನಾಟಕ ತಂಡ ಪಂಜಾಬ್‌ ಎದುರು ಬೋನಸ್‌ ಅಂಕದೊಂದಿಗೆ ಜಯ ಸಾಧಿಸಿದ ಕಾರಣ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲ ರಣಜಿ: ಮುಂಬೈನ ಪ್ರವೀಣ್‌ ತಾಂಬೆ ಈ ಪಂದ್ಯವನ್ನಾಡುವ ಮೂಲಕ ರಣಜಿಗೆ ಪದಾರ್ಪಣೆ ಮಾಡಿದರು. ಅವರಿಗೆ ಈಗ 42 ವರ್ಷ!

ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಪರ ಆಡುವ ತಾಂಬೆ ಅವರಿಗೆ ಇದೇ ಮೊದಲ ಸಲ ರಣಜಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಪಂದ್ಯದಲ್ಲಿ ಅವರು ಎರಡು ವಿಕೆಟ್‌ ಕಬಳಿಸಿದರು.

ಚಾಂಪಿಯನ್ಸ್‌ ಟ್ರೋಫಿಯಲ್ಲೂ ತಾಂಬೆ ಉತ್ತಮ ಪ್ರದರ್ಶನ ತೋರಿ ದ್ದರು. ಐದು ಪಂದ್ಯಗಳಿಂದ 12 ವಿಕೆಟ್‌್ ಕಬಳಿಸಿದ್ದರು. ಆದ್ದರಿಂದ ಅವರಿಗೆ ರಣಜಿ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಸಾರಥ್ಯ: ಬೆಂಗಳೂರಿನಲ್ಲಿ ಡಿ.‌22ರಿಂದ ನಡೆಯಲಿರುವ ಕರ್ನಾಟಕ ಎದುರಿನ ಪಂದ್ಯಕ್ಕೆ  ಜಾಫರ್‌ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.

ರಣಜಿ ಇತರ ಪಂದ್ಯಗಳ ಫಲಿತಾಂಶ
*ವಿಶಾಖ ಪಟ್ಟಣ: ಆಂಧ್ರ ಮೊದಲ ಇನಿಂಗ್ಸ್‌ 417 ಮತ್ತು 232ಕ್ಕೆ3 ಡಿಕ್ಲೇರ್ಡ್‌. ಹಿಮಾಚಲ ಪ್ರದೇಶ 305 ಹಾಗೂ ಎರಡನೇ ಇನಿಂಗ್ಸ್‌ 39 ಓವರ್‌ಗಳಲ್ಲಿ 5 ವಿಕೆಟ್‌ಗೆ 154. ಫಲಿತಾಂಶ: ಡ್ರಾ

*ಪೂರ್ವೊರಿಮ್: ಹೈದರಾಬಾದ್‌ ಮೊದಲ ಇನಿಂಗ್ಸ್‌ 514ಕ್ಕೆ6 ಡಿಕ್ಲೇರ್ಡ್‌ ಮತ್ತು 5  ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 11. ಗೋವಾ ಪ್ರಥಮ ಇನಿಂಗ್ಸ್‌ 164.4 ಓವರ್‌ಗಳಲ್ಲಿ 465. ಫಲಿತಾಂಶ: ಡ್ರಾ

*ಅಹಮದಾಬಾದ್‌: ಹರಿಯಾಣ ಮೊದಲ ಇನಿಂಗ್ಸ್‌ 573ಕ್ಕೆ6 ಡಿಕ್ಲೇರ್ಡ್‌. ಗುಜರಾತ್‌ ಪ್ರಥಮ ಇನಿಂಗ್ಸ್‌ 172 ಓವರ್‌ಗಳಲ್ಲಿ 578. ಫಲಿತಾಂಶ: ಡ್ರಾ

*ಜಮ್ಮು: ಅಸ್ಸಾಂ 263 ಹಾಗೂ ದ್ವಿತೀಯ ಇನಿಂಗ್ಸ್‌ 195. ಜಮ್ಮು ಮತ್ತು ಕಾಶ್ಮೀರ ಮೊದಲ ಇನಿಂಗ್ಸ್‌ 427 ಹಾಗೂ 6.2 ಓವರ್‌ಗಳಲ್ಲಿ 1 ವಿಕೆಟ್‌ಗೆ 32. ಫಲಿತಾಂಶ: ಜಮ್ಮು ಮತ್ತು ಕಾಶ್ಮೀರಕ್ಕೆ 9 ವಿಕೆಟ್‌ ಗೆಲುವು

*ಕಣ್ಣೂರು: ಕೇರಳ ಮೊದಲ ಇನಿಂಗ್ಸ್‌ 151 ಹಾಗೂ 432. ಮಹಾರಾಷ್ಟ್ರ 314 ಮತ್ತು ದ್ವಿತೀಯ ಇನಿಂಗ್ಸ್‌ 41 ಓವರ್‌ಗಳಲ್ಲಿ 3 ವಿಕೆಟ್‌ಗೆ 130. ಫಲಿತಾಂಶ: ಡ್ರಾ

*ಇಂದೋರ್‌: ಮಧ್ಯಪ್ರದೇಶ ಪ್ರಥಮ ಇನಿಂಗ್ಸ್‌ 619ಕ್ಕೆ8 ಡಿಕ್ಲೇರ್ಡ್‌ ಹಾಗೂ 34 ಓವರ್‌ಗಳಲ್ಲಿ 2 ವಿಕೆಟ್‌ಗೆ 119. ಸೌರಾಷ್ಟ್ರ ಮೊದಲ ಇನಿಂಗ್ಸ್‌ 492. ಫಲಿತಾಂಶ: ಡ್ರಾ.

*ದೆಹಲಿ: ತಮಿಳುನಾಡು 246 ಹಾಗೂ ಎರಡನೇ ಇನಿಂಗ್ಸ್‌ 25 ಓವರ್‌ಗಳಲ್ಲಿ 28ಕ್ಕೆ2. ರೈಲ್ವೆಸ್‌ ಮೊದಲ ಇನಿಂಗ್ಸ್‌್ 169. ಫಲಿತಾಂಶ: ಡ್ರಾ

*ದೆಹಲಿ: ವಿದರ್ಭ ಮೊದಲ ಇನಿಂಗ್ಸ್‌ 88 ಹಾಗೂ 63.1 ಓವರ್‌ಗಳಲ್ಲಿ 204. ದೆಹಲಿ ಪ್ರಥಮ ಇನಿಂಗ್ಸ್‌್ 448.
     ಫಲಿತಾಂಶ: ದೆಹಲಿಗೆ ಇನಿಂಗ್ಸ್‌ ಮತ್ತು 156 ರನ್‌ ಗೆಲುವು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT