ADVERTISEMENT

ನಥಾನ್ ಹೌರಿಜ್ ಆಡುವುದು ಅನುಮಾನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಮೆಲ್ಬರ್ನ್ (ಐಎಎನ್‌ಎಸ್): ಆಫ್ ಸ್ಪಿನ್ನರ್ ನಥಾನ್ ಹೌರಿಜ್ ಅವರು ವಿಶ್ವಕಪ್‌ನಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡದ ನೆರವಿಗೆ ಲಭ್ಯವಾಗುವುದು ಅನುಮಾನ.
ತೋಳಿನ ಮೂಳೆಯು ಸರಿದಿರುವುದರಿಂದ ಗಾಯಗೊಂಡಿರುವ ಅವರು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು. ಆದ್ದರಿಂದ ಅವರು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಬಾಕಿ ಪಂದ್ಯಗಳಲ್ಲಿ ಆಡುವುದಿಲ್ಲ ಎನ್ನುವುದು ಖಚಿತವಾಗಿದೆ. ವಿಶ್ವಕಪ್‌ನಲ್ಲಿಯೂ ಆಡುವ ಸಾಧ್ಯತೆಗಳು ಕಡಿಮೆ.

ಗಾಯಗೊಂಡಿರುವ ಹೌರಿಜ್ ಬದಲಿಗೆ ಇಂಗ್ಲೆಂಡ್ ವಿರುದ್ಧದ ಬಾಕಿ ಪಂದ್ಯಗಳಲ್ಲಿ ಆಡಲು ಆಸ್ಟ್ರೇಲಿಯಾ ತಂಡಕ್ಕೆ ಎಡಗೈ ಸ್ಪಿನ್ನರ್ ಕ್ಸೇವಿಯರ್ ಡೊಹರ್ಟಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಆಯಷಸ್ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡದಿದ್ದ ಕ್ಸೇವಿಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಈಗ ಏಕದಿನ ಪಂದ್ಯಗಳಲ್ಲಿ ಆಡಲು ಅವಕಾಶ ಮಾಡಿಕೊಡಲಾಗಿದೆ.

ಆಸ್ಟ್ರೇಲಿಯಾ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚತೊಡಗಿದೆ. ಶಾನ್ ಟೈಟ್ ಕೂಡ ತೊಡೆಯ ನೋವಿನಿಂದ ಬಳಲಿದ್ದಾರೆ. ಆದ್ದರಿಂದ ಅವರು ಆಡಲು ದೈಹಿಕವಾಗಿ ಸಮರ್ಥರಾಗಿಲ್ಲವೆನಿಸಿದರೆ, ವೇಗದ ಬೌಲರ್ ಪೀಟರ್ ಸಿಡ್ಲ್ ಅವರನ್ನು ಕಾಯ್ದಿರಿಸಲಾಗಿದೆ. ಶುಕ್ರವಾರ ಹೊಬರ್ಟ್‌ನಲ್ಲಿ ಆಸ್ಟ್ರೇಲಿಯಾ 46 ರನ್‌ಗಳಿಂದ ವಿಜಯ ಸಾಧಿಸಿದ ಎರಡನೇ ಏಕದಿನ ಪಂದ್ಯದಲ್ಲಿ ಟೈಟ್ ಗಾಯಗೊಂಡಿದ್ದರು.

ಟೈಟ್ ಅವರು ಬೇಗ ಚೇತರಿಸಿಕೊಳ್ಳಬಹುದು. ಆದರೆ ಹೌರಿಜ್ ಮೂಳೆ ಸರಿದಿರುವುದು ಗಂಭೀರವಾಗಿದೆ. ಆದ್ದರಿಂದ ಅವರು ವಿಶ್ವಕಪ್ ಹೊತ್ತಿಗೆ ಚೇತರಿಸಿಕೊಳ್ಳುತ್ತಾರೆಂದು ವಿಶ್ವಾಸದಿಂದ ಹೇಳಲು ಸಾಧ್ಯವಿಲ್ಲವೆಂದು ತಂಡದ ಫಿಸಿಯೊ ಅಲೆಕ್ಸ್ ಕೌಂಟೊರಿಸ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.