ADVERTISEMENT

ನನ್ನ ನೆರವಿಗೆ ಯಾರೂ ಬರುತ್ತಿಲ್ಲ: ಸರಿತಾ ಅಳಲು

ವರದಿ ಕೇಳಿದ ಕ್ರೀಡಾ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 20:13 IST
Last Updated 1 ಅಕ್ಟೋಬರ್ 2014, 20:13 IST

ಇಂಚೆನ್‌/ನವದೆಹಲಿ: ಭಾರತದ ಬಾಕ್ಸರ್‌ ಎಲ್‌. ಸರಿತಾ ದೇವಿ ತಮಗೆ ಲಭಿಸಿದ್ದ ಕಂಚಿನ ಪದಕವನ್ನು ವಿಜಯ ವೇದಿಕೆಯಲ್ಲಿ ತಿರಸ್ಕರಿಸಿದ ಘಟನೆ ವಿವಾದಕ್ಕೆ ಕಾರಣವಾಗಿದ್ದು, ‘ನನ್ನ ನೆರವಿಗೆ ಯಾರೂ ಬರುತ್ತಿಲ್ಲ’  ಎಂದು ಸರಿತಾ ಅಳಲು ತೋಡಿಕೊಂಡಿದ್ದಾರೆ.

‘ಸೆಮಿಫೈನಲ್‌ ಪಂದ್ಯ ಮುಗಿದು 24 ಗಂಟೆ ಕಳೆದರೂ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ರೆಫರಿಗಳು ಮಾಡಿದ ಅನ್ಯಾಯದ ಬಗ್ಗೆಯೂ ಭಾರತೀಯ ಅಧಿಕಾರಿಗಳು ಧ್ವನಿ ಎತ್ತುತ್ತಿಲ್ಲ. ಏನೂ ಆಗಿಲ್ಲವೇನೋ ಎನ್ನುವಂತೆ ಇದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರು ವವರು ಈ ರೀತಿ ಏಕೆ ನಡೆದು ಕೊಳ್ಳುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ’ ಎಂದು ಮಣಿಪುರದ ಬಾಕ್ಸರ್‌ ಬುಧವಾರ ಬೇಸರ ತೋಡಿಕೊಂಡಿದ್ದಾರೆ.

‘ಸೆಮಿಫೈನಲ್‌ ಪಂದ್ಯದಲ್ಲಿ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರೆ ಯಾರೊಬ್ಬರೂ ಸ್ಪಂದಿಸಲಿಲ್ಲ’ ಎಂದು ಸರಿತಾ ಪತಿ ತೋಯಿಬಾ ಸಿಂಗ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರೀಡಾಪಟುವೊಬ್ಬರು ‘ನನಗೆ ಯಾರೂ ಬೆಂಬಲ ನೀಡಲಿಲ್ಲ ಎಂದು ಸರಿತಾ ದೇವಿ ಹೇಳಿದ್ದು ಸುಳ್ಳು. ಘಟನೆ ನಡೆದ ನಂತರ ಭಾರತದ ಅಧಿಕಾರಿಗಳು ಪ್ರತಿಭಟಿಸಿ ಸಂಘಟಕರಿಗೆ ಮನವಿ ಸಲ್ಲಿಸಿದ್ದಾರೆ’ ಎಂದಿದ್ದಾರೆ.

ಸರಿತಾ ನೆರವಿಗೆ ಸರ್ಕಾರ: ಕೇಂದ್ರ ಸರ್ಕಾರ ಸರಿತಾ ನೆರವಿಗೆ ನಿಂತಿದೆ. ‘ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಭಾರತ ಒಲಿಂಪಿಕ್‌ ಸಂಸ್ಥೆಗೆ ಸೂಚಿಸಿದ್ದೇವೆ. ವರದಿ ಬಂದ ನಂತರ ಮುಂದಿನ ಹಾದಿಯ ಬಗ್ಗೆ ಯೋಚಿಸುತ್ತೇವೆ’ ಎಂದು ಕ್ರೀಡಾ ಇಲಾಖೆ ಹೇಳಿದೆ.

ಪದಕ ಪ್ರದಾನ ವೇಳೆ ಸರಿತಾ ತೋರಿದ ವರ್ತನೆಗೆ ಭಾರತ ತಂಡದ ಚೆಫ್‌ ಡಿ ಮಿಷನ್ ಆದಿಲೆ ಸುಮರಿವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಕಣ್ಣೀರಿಟ್ಟ ಸರಿತಾ: ಪದಕ ಪ್ರದಾನ ವೇಳೆ ದುಃಖ ತಡೆಯಲಾಗದೆ ಸರಿತಾ ಕಣ್ಣಿರೀಟ್ಟರು. ನಂತರ ಕಂಚಿನ ಪದಕವನ್ನು ದಕ್ಷಿಣ ಕೊರಿಯದ ಬಾಕ್ಸರ್‌ ಕೊರಳಿಗೆ ಹಾಕಿ ಅವರನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದರು. ನಂತರ ಮಾಧ್ಯಮದವರ ಎದುರು ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.