ADVERTISEMENT

ನನ್ನ ಹಾದಿ ಸುಗಮ ಮಾಡಿದ ಕ್ರಿಸ್‌ ಗೇಲ್‌: ಕೆ.ಎಲ್‌. ರಾಹುಲ್‌

ಪಿಟಿಐ
Published 4 ಮೇ 2018, 18:57 IST
Last Updated 4 ಮೇ 2018, 18:57 IST
ಪಂದ್ಯವೊಂದರಲ್ಲಿ ರನ್ ಗಳಿಸಿದ ನಂತರ ಪರಸ್ಪರ ಅಭಿನಂದಿಸಿದ ಗೇಲ್ (ಎಡ) ಮತ್ತು ರಾಹುಲ್‌
ಪಂದ್ಯವೊಂದರಲ್ಲಿ ರನ್ ಗಳಿಸಿದ ನಂತರ ಪರಸ್ಪರ ಅಭಿನಂದಿಸಿದ ಗೇಲ್ (ಎಡ) ಮತ್ತು ರಾಹುಲ್‌   

ಚೆನ್ನೈ: ಭಾರಿ ಹೊಡೆತಗಳ ಆಟಗಾರ ಕ್ರಿಸ್‌ ಗೇಲ್‌ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದರಿಂದ ಈ ಬಾರಿ ಐಪಿಎಲ್‌ನಲ್ಲಿ ನನ್ನ ಹಾದಿ ಸುಗಮಗೊಂಡಿದೆ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಟಗಾರ ಕೆ.ಎಲ್‌.ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘ಈಗ ಎದುರಾಳಿ ತಂಡದ ಬೌಲರ್‌ಗಳು ಕ್ರಿಸ್‌ ಗೇಲ್‌ ಮೇಲೆ ನೋಟ ಇಟ್ಟಿರುತ್ತಾರೆ. ಆದ್ದರಿಂದ ನಾನು ನಿರಾಳವಾಗಿರಲು ಸಾಧ್ಯವಾಗುತ್ತಿದೆ. ಒತ್ತಡವಿಲ್ಲದೆ ಬ್ಯಾಟಿಂಗ್ ಮಾಡುವುದಕ್ಕೂ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

‘ಈಗ ನಿಜಕ್ಕೂ ಕ್ರಿಕೆಟ್‌ ಜೀವನ ಮೋಜು ನೀಡುತ್ತಿದೆ. ಕ್ರಿಸ್‌ ಗೇಲ್‌ ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ. ನಗು ನಗುತ್ತಾ ಬ್ಯಾಟಿಂಗ್ ಮಾಡುವ ಗೇಲ್‌ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಭಾಗ್ಯ’ ಎಂದು ರಾಹುಲ್ ಹೇಳಿದರು.

ADVERTISEMENT

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗಲೂ ಗೇಲ್ ಜೊತೆ ಆಡುವ ಅವಕಾಶ ಲಭಿಸಿತ್ತು. ಉತ್ತಮ ವ್ಯಕ್ತಿತ್ವ ಹೊಂದಿರುವ ಅವರ ಜೊತೆಗೆ ನನ್ನ ಸಂಬಂಧ ಈಗ ಇನ್ನಷ್ಟು ಹೆಚ್ಚಿದೆ. ಇಬ್ಬರೂ ಪರಸ್ಪರರನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರ ಜೊತೆಗೆ ಪಿಚ್‌ನಲ್ಲೂ ಹೊರಗೆಯೂ ಖುಷಿಯಾಗಿರುತ್ತೇನೆ’ ಎಂದು ರಾಹುಲ್ ತಿಳಿಸಿದರು.

ಇನ್ನಷ್ಟು ಉತ್ತಮಗೊಳ್ಳಬೇಕು: ‘ಟೂರ್ನಿಯಲ್ಲಿ ಈ ವರೆಗೆ ಉತ್ತಮ ಬ್ಯಾಟಿಂಗ್ ಮಾಡಿದ್ದೇನೆ. ನನ್ನ ಸಾಮರ್ಥ್ಯವನ್ನು ಉತ್ತಮಪಡಿಸಲು ಇನ್ನಷ್ಟು ಅವಕಾಶವಿದ್ದು ಆ ಕಡೆಗೆ ಗಮನ ಕೊಟ್ಟಿದ್ದೇನೆ’ ಎಂದು ಹೇಳಿದ ಅವರು ‘ಸದ್ಯ ಐಪಿಎಲ್‌ ಬಗ್ಗೆ ಮಾತ್ರ ಗಮನ ನೀಡಿದ್ದೇನೆ, ಕೌಂಟಿ ಕ್ರಿಕೆಟ್ ಆಡುವ ಯೋಚನೆ ಮಾಡಿಲ್ಲ’ ಎಂದರು.

ಈ ಬಾರಿಯ ಐಪಿಎಲ್‌ನಲ್ಲಿ ರಾಹುಲ್ ಏಳು ಪಂದ್ಯಗಳಲ್ಲಿ ಒಟ್ಟು 268 ರನ್‌ ಗಳಿಸಿದ್ದಾರೆ. ಅವರ ಸ್ಟ್ರೈಕ್‌ ರೇಟ್‌ 170.70 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.