ADVERTISEMENT

ನವೆಂಬರ್‌ನಲ್ಲಿ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬೆಂಗಳೂರಿನಲ್ಲಿ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನವೆಂಬರ್‌ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.
ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆದಿದ್ದು, ಅಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

ಅಖಿಲ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನವರು ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ಗೆ ರಾಜ್ಯವೇ ಆತಿಥ್ಯ ವಹಿಸಬೇಕೆಂದು ಹಿಂದೆಯೇ ತಿಳಿಸಿದ್ದು, ಅದು ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಫೆಡರೇಷನ್‌ನ ಸೂಚನೆಯ ಮೇರೆಗೆ ರಾಜ್ಯ ಸಂಸ್ಥೆಗೆ ಶೀಘ್ರದಲ್ಲಿಯೇ ಚುನಾವಣೆ ಪ್ರಕ್ರಿಯೆ ಆರಂಭ­ಗೊಳ್ಳಲಿದೆ. ಹೀಗಾಗಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿರುವುದರಿಂದ ಜೂನಿಯರ್‌ ಅಥ್ಲೆಟಿಕ್ಸ್‌ ಕೂಟವನ್ನು ನವೆಂಬರ್‌ಗೆ ಮುಂದೂಡಬೇಕೆಂದು ಫೆಡರೇಷನ್‌ಗೆ ಮನವಿ ಸಲ್ಲಿಸಲು ಈ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.

ರಾಜ್ಯ ಸಂಸ್ಥೆಯ ಅಧ್ಯಕ್ಷ ಜಿ.ಪರಮೇಶ್ವರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸತ್ಯನಾರಾಯಣ, ಡೇವಿಡ್‌ ಪ್ರೇಮನಾಥ್‌, ಚಂದ್ರಶೇಖರ ರೈ, ಬಾಬು ಶೆಟ್ಟಿ, ಮುನಿಸಂಜೀವಪ್ಪ, ರಾಜವೇಲು, ಬಿ.ಎಸ್‌.ಬಿ.ನಾಯ್ಡು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.