ADVERTISEMENT

ನಾಗಪುರದಲ್ಲಿ ರನ್ನುಗಳ ಮಳೆ ನಿರೀಕ್ಷೆ

ಗೋಪಾಲಕೃಷ್ಣ ಹೆಗಡೆ
Published 10 ಮಾರ್ಚ್ 2011, 18:50 IST
Last Updated 10 ಮಾರ್ಚ್ 2011, 18:50 IST

ನಾಗಪುರ: ಮೂರು ಪಂದ್ಯಗಳಲ್ಲಿ 11 ವಿಕೆಟ್ ಗಳಿಸುವುದರೊಂದಿಗೆ ಗಮನ ಸೆಳೆದಿರುವ ದಕ್ಷಿಣ ಆಫ್ರಿಕದ ಹೊಸ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಅವರಿಗೆ ಹತ್ತು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರ ಎಡಗೈಗೆ ಪೆಟ್ಟು ಬಿದ್ದಿತ್ತು.

ಎಕ್ಸರೇ ವರದಿಯಲ್ಲಿ, ಎಡಗೈ ಬೆರಳಿನ ಮೂಳೆಯಲ್ಲಿ ಚಿಕ್ಕ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಆದರೆ ಇಮ್ರಾನ್ ತಾಹಿರ್ ಬೌಲಿಂಗ್ ಕೈಗೇನೂ ಆಗಿಲ್ಲ. ಅವರು ಶನಿವಾರ ಭಾರತ ವಿರುದ್ಧ ಆಡುವ ಬಗ್ಗೆ ತಂಡ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಭಾರತ ವಿರುದ್ಧ ಆಡಿ, ನಂತರ ಹತ್ತು ದಿನ ವಿಶ್ರಾಂತಿ ಪಡೆಯುವ ಸಾಧ್ಯತೆಯೂ ಇದೆ ಎಂದು ತಂಡದ ಆರಂಭಿಕ ಬ್ಯಾಟ್ಸಮನ್ ಹಾಶಿಮ್ ಆಮ್ಲಾ ಗುರುವಾರ ತಂಡದ ಅಭ್ಯಾಸ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಾಕಿಸ್ತಾನ ಮೂಲದ ಇಮ್ರಾನ್ ತಾಹಿರ್ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ್ದು ಪಾಕಿಸ್ತಾನದಲ್ಲೇ. 19 ವರ್ಷದೊಳಗಿನವರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಪರ ಆಡಿದ್ದ ಅವರು ದಕ್ಷಿಣ ಆಫ್ರಿಕಕ್ಕೆ ಬಂದು ಡರ್ಬನ್ ವನಿತೆಯನ್ನು ಮದುವೆಯಾದರು. ಇದರಿಂದಾಗಿ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕ ಪರ ಆಡುವ ಅರ್ಹತೆ ದೊರೆಯಿತು. ಈ ಹತ್ತನೇ ವಿಶ್ವ ಕಪ್ ಟೂರ್ನಿಯೊಂದಿಗೆ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರಯಾಣ ಆರಂಭವಾಯಿತು. ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಅವರು ಹಾಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಪಿನ್ನರುಗಳನ್ನು ಚೆನ್ನಾಗಿ ಎದುರಿಸುವ ಭಾರತ ಆಟಗಾರರ ವಿರುದ್ಧ ಇಮ್ರಾನ್ ಹೇಗೆ ಬೌಲ್ ಮಾಡುವುರು ಎಂಬುದೇ ಈಗಿರುವ ಕುತೂಹಲ. ಭಾರತ ಹಾಗೂ ದಕ್ಷಿಣ ಆಫ್ರಿಕ ತಂಡಗಳು ಕ್ವಾರ್ಟರ್ ಫೈನಲ್ ತಲುಪುವುದು ಖಚಿತವಾಗಿದ್ದರೂ, ಶನಿವಾರದ ಪಂದ್ಯದಲ್ಲಿ ತೀವ್ರ ಹೋರಾಟ ಕಂಡುಬರುವುದರಲ್ಲಿ ಅನುಮಾನವಿಲ್ಲ. ಪಿಚ್ ಬ್ಯಾಟ್ಸಮನ್ನರಿಗೆ ಹೇಳಿ ಮಾಡಿಸಿದಂತಿದ್ದು ರನ್ನುಗಳ ಹೊಳೆ ಹರಿಯುವ ನಿರೀಕ್ಷೆ ಇದೆ.

“ಭಾರತ ತಂಡದಲ್ಲಿ ವಿಶ್ವ ದರ್ಜೆ ಆಟಗಾರರಿದ್ದಾರೆ. ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಆದರೆ ನಮ್ಮ ವೇಗದ ದಾಳಿಯಿಂದ ಅವರನ್ನು ಕಟ್ಟಿಹಾಕುವ ವಿಶ್ವಾಸ ನಮಗಿದೆ. ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲು ನಮಗೆ ನಿರಾಶೆಯುಂಟುಮಾಡಿದೆ. ಅದನ್ನು ಹೋಗಲಾಡಿಸಲು ಭಾರತ ಗೆಲ್ಲುವುದೇ ನಮ್ಮ ಗುರಿ. ನಮಗಿಂತ ಹೆಚ್ಚು ಭಾರತ ತಂಡವೇ ಒತ್ತಡದಲ್ಲಿದೆ” ಎಂದು ಹಾಶಿಮ್ ಆಮ್ಲಾ ಹೇಳಿದರು.

‘ಚೆನ್ನೈನ ಪಿಚ್ ಮೇಲೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು. ಪಿಚ್ ಅಷ್ಟು ಬೇಗ ಸತ್ವ ಕಳೆದುಕೊಳ್ಳುವ ನಿರೀಕ್ಷೆ ಇರಲಿಲ್ಲ. ನಾವು ಇನ್ನಷ್ಟು ತಾಳ್ಮೆಯಿಂದ ಆಡಬೇಕಿತ್ತು. ಜ್ಯಾಕ್ ಕಾಲಿಸ್ ನಮ್ಮ ತಂಡದಲ್ಲಿರುವ ವಿಶ್ವ ದರ್ಜೆ ಆಟಗಾರ. ಅವರಿಂದ ದೊಡ್ಡ ಆಟ ಬಂದೇ ಬರುತ್ತದೆ. ಅವರ ಅನುಭವವೇ ನಮಗೆಲ್ಲ ಸ್ಫೂರ್ತಿ” ಎಂದೂ ಅವರು ಅಭಿಪ್ರಾಯಪಟ್ಟರು.ಭಾರತ ತಂಡದ ಆಟಗಾರರು ಗುರುವಾರ ನಾಗಪುರಕ್ಕೆ ಆಗಮಿಸಿದರು. ಶುಕ್ರವಾರ ಎರಡೂ ತಂಡಗಳು ಅಭ್ಯಾಸ ನಡೆಸಲಿವೆ.

ಟಿಕೆಟ್ ಖಾಲಿ: ಬೆಂಗಳೂರಿನಲ್ಲಿ ಆದಂತೆ ನಾಗಪುರದಲ್ಲೂ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಇದೆ. ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಈ ವಿಶ್ವ ಕಪ್‌ನ ಮೂರು ಪಂದ್ಯಗಳು ಇದುವರೆಗೆ ಇಲ್ಲಿ ನಡೆದಿದ್ದು, ಮೂರೂ ಪಂದ್ಯಗಳಲ್ಲಿ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಇಂಗ್ಲೆಂಡ್ ಮತ್ತು ಹಾಲೆಂಡ್ ನಡುವಿನ ಪಂದ್ಯದಲ್ಲಿ ಒಟ್ಟು 588 ರನ್ನುಗಳು ಹರಿದಿದ್ದವು. ಕೆನಡಾ ವಿರುದ್ಧ ಜಿಂಬಾಬ್ವೆ 298 ರನ್ ಹೊಡೆಯಿತು. ಆದರೆ ಕೆನಡಾ ಅದೇ ರೀತಿ ಬ್ಯಾಟ್ ಮಾಡಲಿಲ್ಲ. ಇದಕ್ಕೆ ಮೊದಲು ನ್ಯೂಜಿಲೆಂಡ್ ವಿರುದ್ಧ ಮಿಂಚಿದ್ದ ಆಸ್ಟ್ರೇಲಿಯದ ವೇಗದ ಬೌಲರುಗಳು ತಮ್ಮ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.