ADVERTISEMENT

ನಾಳೆಯಿಂದ ಜೈನ್ ವಿವಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಜನವರಿ 8ರಿಂದ 11ರವರೆಗೆ ಉದ್ಯಾನ ನಗರಿಯಲ್ಲಿ ಅಖಿಲ ಭಾರತ ಕ್ರೀಡಾಕೂಟ ನಡೆಯಲಿದ್ದು, ಸುಮಾರು 1200ಕ್ಕೂ ಅಧಿಕ ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ.

ನಾಲ್ಕು ದಿನಗಳ ಈ ಕ್ರೀಡಾಕೂಟದಲ್ಲಿ ಶ್ರೀಲಂಕಾದ ಕಾಲೇಜ್‌ಗಳಿಂದ ಕೂಡ 50 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ರವೀಣ್ ಕುಮಾರ್ ಭಾನುವಾರ ಸಂಜೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

`ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಾಕಿ, ಬ್ಯಾಸ್ಕೆಟ್‌ಬಾಲ್, ಟೆನಿಸ್, ಈಜು, ಅಥ್ಲೆಟಿಕ್ಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ಸಾಫ್ಟ್‌ಬಾಲ್ ಹಾಗೂ ಫುಟ್‌ಬಾಲ್ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಮಹಿಳೆಯರಿಗೂ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟಕ್ಕೆ ವೇಗಾಸ್ ಪ್ರಾಯೋಜಕತ್ವ ವಹಿಸಿದೆ. ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳಿಗೆ ಉಚಿತ ಆಹಾರ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ~ ಎಂದು ಜೈನ್ ವಿವಿಯ ಕ್ರೀಡಾ ನಿರ್ದೇಶಕ ಯು.ವಿ.ಶಂಕರ್ ಶುಕ್ರವಾರ ತಿಳಿಸಿದರು.

ಸ್ಪರ್ಧೆಗಳು ಕಂಠೀರವ ಕ್ರೀಡಾಂಗಣಗಳು, ರಾಜೀವ್ ಗಾಂಧಿ ಕ್ರೀಡಾ ಸಮುಚ್ಚಯ, ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಮಾಧವನ್ ಪಾರ್ಕ್ ಹಾಗೂ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ.

ಶ್ರೀಲಂಕಾದ ಗಾಂಪಾ ಜಿಲ್ಲೆಯ ಕಾಲೇಜ್, ರಾಯಲ್ ಕಾಲೇಜ್, ಚೆನ್ನೈನ ಎಸ್.ಎಸ್.ಎನ್.ಕಾಲೇಜ್, ಎಸ್.ಆರ್.ಎಂ. ವಿವಿ, ತಿರುಚ್ಚಿಯ ಅಣ್ಣಾ ವಿವಿ, ಕಾಶ್ಮೀರದ ಎಸ್‌ಎಸ್‌ಎಂ ಕಾಲೇಜ್, ಚೆನ್ನೈನ ವಿವೇಕಾನಂದ ಕಾಲೇಜ್ ಸೇರಿದಂತೆ ಒಟ್ಟು 35 ಕಾಲೇಜ್‌ಗಳು ಈ ಕ್ರೀಡಾಕೂಟದಲ್ಲಿ ಪೈಪೋಟಿ ನಡೆಸಲಿವೆ. ಸ್ಥಳೀಯ ಸಿಎಂಎಸ್ ಜೈನ್, ಸುರಾನಾ ಕಾಲೇಜ್, ಸೇಂಟ್ ಜೋಸೆಫ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್, ಅಲ್ ಅಮೀನ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್, ಮೌಂಟ್ ಕಾರ್ಮೆಲ್ ಕಾಲೇಜ್, ಬಿಎಸ್‌ಇಎಸ್, ಕ್ರೈಸ್ ವಿವಿ, ಎಪಿಎಸ್ ಕಾಲೇಜ್‌ಗಳು ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.