ಚೆನ್ನೈ: ಇಂಗ್ಲೆಂಡ್ ಎದುರು ಗುರುವಾರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ನಾವೇ ಗೆಲುವಿನ ಫೇವರಿಟ್ ಎಂದು ವೆಸ್ಟ್‌ಇಂಡೀಸ್ ತಂಡದ ಸ್ಫೋಟಕ ಹೊಡೆತಗಳ ಬ್ಯಾಟ್ಸ್‌ಮನ್ ಕಿರೋನ್ ಪೊಲಾರ್ಡ್ ತಿಳಿಸಿದ್ದಾರೆ.‘ಪ್ರತಿ ಬಾರಿಯೂ ನಾವೇ ಫೇವರಿಟ್ ಎಂದು ತಿಳಿದು ಆಡಲು ಕಣಕ್ಕಿಳಿಯುತ್ತೇವೆ. ಇಂಗ್ಲೆಂಡ್ ವಿರುದ್ಧದ ಪಂದ್ಯ ನಮಗೆ ಮತ್ತೊಂದು ಪಂದ್ಯವಿದ್ದಂತೆ ಅಷ್ಟೆ. ಸದ್ಯ ನಮ್ಮ ತಂಡದಲ್ಲಿ ಯಾವುದೇ ಒತ್ತಡ ಇಲ್ಲ. ಆದರೆ ಇಂಗ್ಲೆಂಡ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಹಾಗಾಗಿ ಅವರ ಮೇಲೆ ಸಾಕಷ್ಟು ಒತ್ತಡವಿದೆ’ ಎಂದು ಅವರು ಮಂಗಳವಾರ ಅಭ್ಯಾಸ ನಡೆಸಲು ಅಂಗಳಕ್ಕಿಳಿಯುವ ಮುನ್ನ ನುಡಿದರು.
ಹಾಗೆಂದು ನಾವು ಈ ಪಂದ್ಯವನ್ನು ಲಘುವಾಗಿ ಪರಿಗಣಿಸಿಲ್ಲ. ಇಂಗ್ಲೆಂಡ್ ಸಾಮರ್ಥ್ಯದ ಅರಿವು ನಮಗಿದೆ. ವೆಸ್ಟ್‌ಇಂಡೀಸ್‌ನಲ್ಲಿ ಕಳೆದ ವರ್ಷ ನಡೆದ ಟ್ವೆಂಟಿ-20 ವಿಶ್ವಕಪ್‌ನ ಆರಂಭದಲ್ಲಿ ಅವರು ಹಿನ್ನಡೆ ಅನುಭವಿಸಿದ್ದರು. ಆದರೆ ಪುಟಿದೆದ್ದ ಆ ತಂಡ ಚಾಂಪಿಯನ್ ಆಯಿುತು. ಹಾಗಾಗಿ ಈ ಪಂದ್ಯ ಗೆಲ್ಲಲು ನಾವು ಕಠಿಣ ಪ್ರಯತ್ನ ಹಾಕಲೇಬೇಕು ಎಂದರು.
ಮಾಜಿ ನಾಯಕ ಕ್ರಿಸ್ ಗೇಲ್ ಗಾಯದಿಂದ ಚೇತರಿಸಿಕೊಂಡಿದ್ದು ಈ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ಅವರು ಹೇಳಿದರು. ‘ಬಿ ಗುಂಪಿನ ಪಂದ್ಯಗಳು ಅಚ್ಚರಿಗೆ ಕಾರಣವಾಗುತ್ತಿವೆ. ಕೊನೆಯ ಲೀಗ್ ಪಂದ್ಯದವರೆಗೆ ಕುತೂಹಲ ಉಳಿಸಿಕೊಂಡಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.