ADVERTISEMENT

ನಿರಾಸೆಯ ನಡುವೆಯೂ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನವದೆಹಲಿ (ಪಿಟಿಐ): ನಿರಾಸೆಯ ನಡುವೆಯೂ ಭಾರತದ ಸೈನಾ ನೆಹ್ವಾಲ್ ಮಂಗಳವಾರ ಆರಂಭವಾಗಲಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.

ಇತ್ತೀಚಿಗೆ ನಡೆದ ಕೊರಿಯಾ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಈ ಆಟಗಾರ್ತಿ ಸೋಲು ಕಂಡಿದ್ದರು. ಈ ನಿರಾಸೆಯಲ್ಲೂ ಪ್ರದರ್ಶನ ಮಟ್ಟ ಸುಧಾರಿಸಿಕೊಳ್ಳುವ ಗುರಿ ಅವರದು.

ನಾಲ್ಕನೇ ಶ್ರೇಯಾಂಕದ ಹೈದರಾಬಾದ್‌ನ ಈ ಆಟಗಾರ್ತಿ ಕ್ವಾಲಾಲಂಪುರದಲ್ಲಿ ಬುಧವಾರ ನಡೆಯುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಿಂಗಪುರದ ಜುವಾನ್ ಜೂ ಅವರ ಸವಾಲನ್ನು ಎದುರಿಸಲಿದ್ದಾರೆ.

`ಈ ಟೂರ್ನಿಯಲ್ಲಿ ಕನಿಷ್ಠ ಎಂಟರ ಘಟ್ಟವನ್ನಾದರೂ ಪ್ರವೇಶಿಸಬೇಕು~ ಎನ್ನುವ ಗುರಿ ಹೊಂದಿದ್ದೇನೆ ಎಂಬುದು ಸೈನಾ ಅಭಿಪ್ರಾಯ.

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮನ್ ಮಂಗಳವಾರ ನಡೆಯುವ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಏಳನೇ ಶ್ರೇಯಾಂಕದ ಸಿಮೊನ್ ಸ್ಯಾಂಟಿಸೊ ಎದುರು ಆಡಲಿದ್ದಾರೆ. ಇನ್ನೊಬ್ಬ ಆಟಗಾರ ಆನಂದ್ ಪವಾರ್ ಆತಿಥೇಯ ರಾಷ್ಟ್ರದ ಮೊಹಮ್ಮದ್ ಆರಿಫ್ ಅಬ್ದುಲ್ ಲತೀಫ್ ಮೇಲೂ, ಆರ್.ಎಂ.ವಿ. ಗುರುಸಾಯಿದತ್ ಸ್ಥಳೀಯ ಆಟಗಾರ ಡರೆನ್ ಲೆಯಿವೊ ವಿರುದ್ಧವೂ ಸೆಣಸಲಿದ್ದಾರೆ.

ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಸಹ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ ಸ್ಪರ್ಧಿಸಲಿದೆ. ಈ ಜೋಡಿ ಮೊದಲ ಪಂದ್ಯದಲ್ಲಿ ಕ್ರಿಸ್ಟಿನ್ನಾ ಪೆಡರ್‌ಸನ್-ಕಮಿಲ್ಲಾ ರೈಟೆರ್ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.