ರಿಯೊ ಡಿ ಜನೈರೊ (ಎಎಫ್‌ಪಿ): ನೇಮರ್ ಅವರ ಕಾಲ್ಚಳಕದಲ್ಲಿ ಅರಳಿದ ಎರಡು ಅಮೂಲ್ಯ ಗೋಲುಗಳ ಬಲದಿಂದ ಬ್ರೆಜಿಲ್ ಫುಟ್‌ಬಾಲ್ ತಂಡ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದೆ.
ಮರಕಾನ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ 6–0 ಗೋಲುಗಳಿಂದ ಹೊಂಡುರಸ್ ತಂಡವನ್ನು ಮಣಿಸಿತು.
ತವರಿನ ಅಭಿಮಾನಿಗಳ ಬಲ ದೊಂದಿಗೆ ಕಣಕ್ಕಿಳಿದಿದ್ದ ಆತಿಥೇಯರ ಖಾತೆಗೆ ಮೊದಲ ನಿಮಿಷದಲ್ಲಿಯೇ ಗೋಲು ಸೇರ್ಪಡೆಯಾಯಿತು.
ಚೆಂಡನ್ನು ಡ್ರಿಬಲ್ ಮಾಡುತ್ತಾ ಎದುರಾಳಿ ತಂಡದ ಆವರಣದೊಳಗೆ ಪ್ರವೇಶಿಸಿದ ನೇಮರ್ ಅದನ್ನು ಗುರಿ ಮುಟ್ಟಿಸುವಲ್ಲಿ ತಪ್ಪು ಮಾಡಲಿಲ್ಲ.
ಎದುರಾಳಿ ತಂಡದ ದುರ್ಬಲಾ ರಕ್ಷಣಾ ವಿಭಾಗವನ್ನು ಗುರಿಯಾಗಿಸಿ ಕೊಂಡಿದ್ದ ಈ ಬ್ರೆಜಿಲ್ ಆಟಗಾರರು ಆ ಬಳಿಕವೂ ಗೋಲಿನ ಮಳೆ ಸುರಿಸಿದರು.
ಜೀಸಸ್ ಗ್ಯಾಬ್ರಿಯಲ್ 26 ಮತ್ತು 35ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಮಾರ್ಕ್ವಿನೊಸ್ 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರೆ, ಲುವಾನ್ 79ನೇ ನಿಮಿಷದಲ್ಲಿ ಗೋಲು ದಾಖಲಿಸಿ ದರು. ಇಷ್ಟಾದರೂ ಪ್ರವಾಸಿ ತಂಡದ ಅಬ್ಬರ ಕಡಿಮೆಯಾಗಲಿಲ್ಲ. ನೇಮರ್ 91ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಫೈನಲ್‌ನಲ್ಲಿ ಬ್ರೆಜಿಲ್ ತಂಡ ಜರ್ಮನಿ ವಿರುದ್ಧ ಸೆಣಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಜರ್ಮನಿ 2–0 ಗೋಲುಗಳಿಂದ ನೈಜೀರಿಯ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.