ADVERTISEMENT

ನ್ಯೂಜಿಲೆಂಡ್‌ಗೆ ಸ್ಪಿನ್ನರ್‌ಗಳ ಭಯ

ನಾಳೆಯಿಂದ ಏಕದಿನ ಸರಣಿ; ಕುಲದೀಪ್‌ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST
ಕುಲದೀಪ್‌ ಯಾದವ್‌
ಕುಲದೀಪ್‌ ಯಾದವ್‌   

ಮುಂಬೈ (ಎಎಫ್‌ಪಿ): ಬಲಿಷ್ಠ ಭಾರತ ತಂಡಕ್ಕೆ ಸವಾಲೆಸೆಯಲು ಸಜ್ಜಾಗಿರುವ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ಭಯದಲ್ಲಿದೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್‌ 22ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರವಾಸಿ ತಂಡದವರು ಭಾರತದ ಎಡಗೈ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಎದುರಿಸಲು ತಂತ್ರ ಹೆಣೆಯುತ್ತಿದ್ದಾರೆ. ಈ ಇಬ್ಬರು ಬೌಲರ್‌ಗಳು ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದು ಅನೇಕ ಪಂದ್ಯಗಳಲ್ಲಿ ಭಾರತದ ಗೆಲುವಿನ ರೂವಾರಿಗಳಾಗಿದ್ದಾರೆ. ರವಿಚಂದ್ರನ್ ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರ ಸ್ಥಾನಗಳನ್ನು ತುಂಬಿದ್ದರು.

ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಉತ್ತಮ ಲಯದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿಯೇ ನ್ಯೂಜಿಲೆಂಡ್ ತಂಡದವರು ಇಲ್ಲಿಗೆ ಬಂದಿದ್ದಾರೆ. ಆದ್ದರಿಂದ ಟೂರ್ನಿಯಲ್ಲಿ ಎಲ್ಲರ ಗಮನ ಈ ಇಬ್ಬರು ಬೌಲರ್‌ಗಳ ಮೇಲೆ ಕೇಂದ್ರೀಕೃತವಾಗಲಿದೆ. ಇವರಿಬ್ಬರನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಯಾವ ಕಾರಣಕ್ಕೂ ಪ್ರಾಬಲ್ಯ ಮೆರೆಯಲು ಬಿಡುವುದಿಲ್ಲ ಎಂದು ಪ್ರವಾಸಿ ತಂಡದವರು ಈಗಾಗಲೇ ಭರವಸೆ ವ್ಯಕ್ತಪಡಿಸಿದ್ದಾರೆ.

ADVERTISEMENT

’ವೇಗಿಗಳಿಗಿಂತ ಸ್ಪಿನ್ನರ್‌ಗಳನ್ನು ಎದುರಿಸುವ ಬಗ್ಗೆ ಹೆಚ್ಚು ಗಮನ ನೀಡಲಾಗಿದೆ. ಸ್ಪಿನ್‌ ದಾಳಿಯನ್ನುಮೆಟ್ಟಿ ನಿಂತು ರನ್ ಕಲೆ ಹಾಕಲು
ತಂಡಕ್ಕೆ ಸಾಧ್ಯವಿದೆ’ ಎಂದು ಬ್ಯಾಟ್ಸ್‌ಮನ್ ಟಾಮ್ ಲಥಾಮ್ ಹೇಳಿದರು.

ದಿಢೀರ್‌ ಬೆಳೆದು ನಿಂತ ಕುಲದೀಪ್‌

22 ವರ್ಷದ ಕುಲದೀಪ್‌ ಯಾದವ್‌ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ ಅಪರೂಪದ ಬೌಲರ್‌. ಕಳೆದ ಮಾರ್ಚ್‌ನಲ್ಲಿ ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದಾಗಲೇ ಇವರ ಸಾಮರ್ಥ್ಯ ಹೊರಜಗತ್ತಿಗೆ ತಿಳಿದದ್ದು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಭಾರತ 4–1ರಿಂದ ಜಯ ಗಳಿಸಲು ಕುಲದೀಪ್ ಯಾದವ್ ಅವರ ಅಮೋಘ ಬೌಲಿಂಗ್ ಕೂಡ ಕಾರಣವಾಗಿತ್ತು. ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಮಾಡಿದ ನಂತರವಂತೂ ಅವರ ಹೆಸರು ಕ್ರಿಕೆಟ್ ಪ್ರಿಯರ ಮನದಲ್ಲಿ ನೆಲೆಯೂರಿತು.

27 ವರ್ಷದ ಯಜುವೇಂದ್ರ ಚಾಹಲ್ ಅವರಿಂದ ಕುಲದೀಪ್ ಯಾದವ್‌ಗೆ ಉತ್ತಮ ಬೆಂಬಲ ಲಭಿಸುತ್ತಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ನಾಲ್ಕು ಪಂದ್ಯಗಳಿಂದ ಆರು ವಿಕೆಟ್‌ ಕಬಳಿಸಿದ ಅವರು ಸರಣಿ ಜಯದಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದರು. ಇವರಿಬ್ಬರ ಸ್ಪಿನ್‌
ಮತ್ತು ಜಸ್‌ಪ್ರೀತ್ ಬೂಮ್ರಾ–ಭುವನೇಶ್ವರ್ ಕುಮಾರ್ ಜೋಡಿಯ ವೇಗದ ದಾಳಿಯ ನೆರವಿನೊಂದಿಗೆ ಜಯದ ಮುನ್ನುಡಿ ಬರೆಯಲು ಭಾರತ ಕಾತರವಾಗಿದೆ.

‘ಕುಲದೀಪ್‌ ಮತ್ತು ಚಾಹಲ್‌ ಅತ್ಯುತ್ತಮ ಬೌಲರ್ ಎಂಬುದು ನಮಗೆ ತಿಳಿದಿದೆ. ಇತ್ತೀಚಿನ ಸರಣಿಗಳಲ್ಲಿ ಅವರು ತೋರಿದ ಸಾಮರ್ಥ್ಯದ ಅರಿವು ತಂಡಕ್ಕೆ ಇದೆ. ಆದ್ದರಿಂದ ಅವರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಲಥಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.