ADVERTISEMENT

ನ್ಯೂಜಿಲೆಂಡ್ ತಂಡಕ್ಕೆ ಫಿಸಿಯೊ ಸೇವೆ ಇಲ್ಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:10 IST
Last Updated 24 ಫೆಬ್ರುವರಿ 2011, 18:10 IST

ನಾಗಪುರ: ನ್ಯೂಜಿಲೆಂಡ್ ತಂಡವು ಫಿಸಿಯೊ ಡೇಲ್ ಶ್ಯಾಕಲ್ ಮತ್ತು ತರಬೇತುದಾರ ಬ್ರಯನ್ ಸ್ಟ್ರೋನ್ಯಾಕ್ ಅವರ ಸೇವೆಯನ್ನು ಕೆಲವು ದಿನಗಳವರೆಗೆ ಕಳೆದುಕೊಂಡಿದೆ. ಮಂಗಳವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭೂಕಂಪದಲ್ಲಿ ಇವರ ಮನೆಗೆ ಹಾನಿ ಉಂಟಾಗಿದ್ದು, ಕುಟುಂಬ ಸದಸ್ಯರು ತೊಂದರೆ ಅನುಭವಿಸಿದ್ದಾರೆ. ಅವರ ನೆರವಿಗಾಗಿ ಇಬ್ಬರೂ ತವರಿಗೆ ಧಾವಿಸಿದ್ದಾರೆ.

ಈ ಕಾರಣ ಇದೀಗ ಕಿವೀಸ್ ತಂಡ ಫಿಸಿಯೊ ಮತ್ತು ಟ್ರೇನರ್ ಇಲ್ಲದೆಯೇ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಕಣಕ್ಕಿಳಿಯಲಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಫಿಸಿಯೋ ಆಗಿರುವ ಪಾಲ್ ಕ್ಲೋಸ್ ಅವರ ಸೇವೆ ಕೆಲವು ದಿನಗಳವರೆಗೆ ಲಭಿಸಬಹುದೇ ಎಂದು ಕಿವೀಸ್ ತಂಡದ ಕೋಚ್ ಜಾನ್ ರೈಟ್ ಅವರು ಬಿಸಿಸಿಐನಲ್ಲಿ ಕೇಳಿದ್ದಾರೆ.

ಆದರೆ ಕ್ಲೋಸ್ ಅವರನ್ನು ಕಿವೀಸ್ ತಂಡದ ಸೇವೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಕ್ಲೋಸ್ ಅವರು ನ್ಯೂಜಿಲೆಂಡ್‌ನ ಆಕ್ಲೆಂಡ್‌ನವರು. ಈ ಕಾರಣ ಅವರನ್ನು ತಂಡದ ಸೇವೆಗೆ ಬಿಟ್ಟುಕೊಡುವಂತೆ ರೈಟ್ ಬಿಸಿಸಿಐನಲ್ಲಿ ಕೇಳಿಕೊಂಡಿದ್ದರು.

ಕಿವೀಸ್ ಆಟಗಾರ ಸ್ಕಾಟ್ ಸ್ಟೈರಿಸ್ ಅವರು ಈ ಕುರಿತು ‘ಟ್ವಿಟರ್’ನಲ್ಲಿ ನೀಡಿದ ಮಾಹಿತಿ ಗೊಂದಲಕ್ಕೆ ಕಾರಣವಾಗಿತ್ತು. ‘ಭಾರತದಲ್ಲಿರುವ ಫಿಸಿಯೊಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದೆಯೇ?. ನಮ್ಮ ಕೋರಿಕೆಯನ್ನು ಬಿಸಿಸಿಐ ತಳ್ಳಿಹಾಕಿದೆ’ ಎಂದಿದ್ದರು. ಆದರೆ ಜಾನ್ ರೈಟ್ ಮತ್ತು ತಂಡದ ಮ್ಯಾನೇಜರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾವು ಮುಂದಿಟ್ಟ ಕೋರಿಕೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿತ್ತು. ಆದರೆ ಈ ಮೊದಲೇ ನಿರ್ಧರಿಸಿದಂತೆ ಕ್ಲೋಸ್ ಅವರಿಗೆ ಬೇರೆ ಕೆಲಸಗಳು ಇರುವುದರಿಂದ ಅವರನ್ನು ಬಿಟ್ಟುಕೊಡಲು ಒಪ್ಪಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.