ADVERTISEMENT

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯ

ಪಿಟಿಐ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ಭಾರತದ ಶಕ್ತಿಯಾಗಿದ್ದಾರೆ
ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ಭಾರತದ ಶಕ್ತಿಯಾಗಿದ್ದಾರೆ   

ರಾಜ್‌ಕೋಟ್: ಶನಿವಾರ ಇಲ್ಲಿ ನ್ಯೂಜಿಲೆಂಡ್ ಎದುರು ನಡೆಯಲಿರುವ ಟ್ವೆಂಟಿ–20 ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ

ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬಲಾಡ್ಯ ತಂಡವನ್ನು ಮಣಿಸಿ ಬೀಗುತ್ತಿರುವ ಭಾರತ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದೆ.

ನ್ಯೂಜಿಲೆಂಡ್ ಎದುರು ಏಕದಿನ ಕ್ರಿಕೆಟ್ ಸರಣಿಯನ್ನು 2–1ರಿಂದ ಗೆದ್ದಿದ್ದ ವಿರಾಟ್ ಕೊಹ್ಲಿ ಬಳಗವು ಚುಟುಕು ಸರಣಿಯನ್ನೂ ಗೆಲುವಿನೊಂದಿಗೆ ಆರಂಭಿಸಿತ್ತು.

ADVERTISEMENT

ಬ್ಯಾಟಿಂಗ್‌ ಬಲ: ಮೊದಲ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ರಬಲ ಬ್ಯಾಟಿಂಗ್ ಶಕ್ತಿಯನ್ನು ನಿರೂಪಿಸಿದೆ. ಆರಂಭಿಕ ಆಟ ಗಾರರ ಮಿಂಚಿನ ಆಟದಿಂದ ಮೂರು ವಿಕೆಟ್‌ಗೆ 202 ರನ್‌ಗಳ ಭರ್ಜರಿ ಗುರಿಯನ್ನು ನೀಡಿತ್ತು. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅಂಗಳದಲ್ಲಿ ಮಿಂಚು ಹರಿಸಿದ್ದರು. ಈ ಜೋಡಿ 158 ರನ್‌ಗಳ ಅಪರೂಪದ ಜೊತೆಯಾಟ ಆಡಿತ್ತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ದೋನಿ ತಂಡದ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕರ್ನಾಟಕದ ಆಟಗಾರರಿಗೆ ಸ್ಥಾನ: ತಂಡದಲ್ಲಿ ಸ್ಥಾನ ಪಡೆದಿದ್ದರೂ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದಾರೆ. ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಯಶಸ್ವಿಯಾಗಿರುವ ಕಾರಣ ನಾಯಕ ಕೊಹ್ಲಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದ್ದರಿಂದ ಮನೀಷ್ ಪಾಂಡೆ ಅಥವಾ ಕೆ.ಎಲ್‌ ರಾಹುಲ್‌ಗೆ ಸ್ಥಾನ ಸಿಗುವುದು ಕೂಡ ಅನುಮಾನ ಎನಿಸಿದೆ.

ಆಲ್‌ರೌಂಡ್ ಆಟ ಭಾರತ ತಂಡದ ಮೊದಲ ಪಂದ್ಯದ ಜಯಕ್ಕೆ ಕಾರಣವಾಗಿದೆ. ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬೂಮ್ರಾ ವೇಗದ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಕಿವೀಸ್ ಸವಾಲು: ಏಕದಿನ ಸರಣಿಯಲ್ಲಿ ಸೋತಿದ್ದ ಕಿವೀಸ್ ಬಳಗ ಚುಟುಕು ಕ್ರಿಕೆಟ್ ಸರಣಿಯನ್ನು ಯಶಸ್ವಿಯಾಗಿ ಗೆಲ್ಲುವ ಲೆಕ್ಕಾಚಾರ ಹೊಂದಿತ್ತು. ಆದರೆ ಭಾರತ ತಂಡ ಮೊದಲ ಪಂದ್ಯದಲ್ಲಿ ಆಘಾತ ನೀಡಿದೆ. ಸರಣಿ ಉಳಿಸಿಕೊಳ್ಳ ಬೇಕಾದರೆ ಎರಡನೇ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

ದೆಹಲಿಯ ಪಂದ್ಯದಲ್ಲಿ ಟ್ರೆಂಟ್‌ ಬೋಲ್ಟ್ ಹಾಗೂ ಟಿಮ್‌ ಸೌಥಿ ಶಿಸ್ತಿನ ಆಟ ಆಡುವಲ್ಲಿ ವಿಫಲರಾಗಿದ್ದರು. ಆರಂಭಿಕ ಆಟಗಾರರು ಎರಡಂಕಿಯ ಗಡಿ ದಾಟಲಿಲ್ಲ. ಕಳಪೆ ಕ್ಷೇತ್ರರಕ್ಷಣೆ, ಅನಗತ್ಯವಾಗಿ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕಿವೀಸ್ ಸೋಲಿಗೆ ಕಾರಣವಾಗಿತ್ತು. ಎರಡನೇ ಪಂದ್ಯದಲ್ಲಿ ಈ ತಂಡ ಸುಧಾರಿತ ಆಟದ ನಿರೀಕ್ಷೆಯಲ್ಲಿದೆ.

‘ಎಲ್ಲಾ ವಿಭಾಗಗಳಲ್ಲೂ ಭಾರತ ತಂಡ ಉತ್ತಮವಾಗಿ ಆಡಿದೆ. ಟ್ವೆಂಟಿ–20 ಮಾದರಿಯಲ್ಲಿ ಕೊಹ್ಲಿ ಬಳಗ ಸಾಕಷ್ಟು ಸುಧಾರಿಸಿದೆ. ಮುಂದಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ಒಡ್ಡಲಿದ್ದೇವೆ’ ಎಂದು ಕೇನ್ ವಿಲಿಯಮ್ಸನ್‌ ಮೊದಲ ಪಂದ್ಯದ ಬಳಿಕ ಹೇಳಿದ್ದರು.

ಆರಂಭ: ರಾತ್ರಿ 7ಕ್ಕೆ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌.

ತಂಡ ಇಂತಿದೆ
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್‌, ಶಿಖರ್ ಧವನ್‌, ಮಹೇಂದ್ರ ಸಿಂಗ್ ದೋನಿ, ಶ್ರೇಯಸ್‌ ಅಯ್ಯರ್‌, ದಿನೇಶ್ ಕಾರ್ತಿಕ್‌, ಕುಲದೀಪ್‌ ಯಾದವ್‌, ಭುವನೇಶ್ವರ್ ಕುಮಾರ್‌, ಮಹಮ್ಮದ್ ಸಿರಾಜ್‌, ಆಶಿಶ್ ನೆಹ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌, ಕೆ.ಎಲ್‌.ರಾಹುಲ್‌.

ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್‌ ಬೌಲ್ಟ್‌, ಟಾಮ್‌ ಬ್ರೂಸ್‌, ಕೊಲಿನ್ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್ ಗಪ್ಟಿಲ್‌, ಮ್ಯಾಟ್ ಹೆನ್ರಿ, ಟಾಮ್‌ ಲಥಾಮ್‌, ಹೆನ್ರಿ ನಿಕೊಲಸ್‌, ಅಡಮ್‌ ಮಿಲ್ನೆ, ಕೊಲಿನ್ ಮುನ್ರೊ, ಗ್ಲೆನ್‌ ಫಿಲಿಪ್ಸ್‌, ಮೈಕಲ್ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್ ಸೌಥಿ.

ಪಿಚ್‌ ವಿವರ: ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಎರಡನೇ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಇದಾಗಿದೆ. 2013ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡ ಜಯಿಸಿತ್ತು. ಈ ಹಿಂದೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಈ ಅಂಗಳದಲ್ಲಿ ಟೆಸ್ಟ್ ಪಂದ್ಯ ಆಡಿವೆ.

ರ‍್ಯಾಂಕಿಂಗ್: ಕಿವೀಸ್ ವಿರುದ್ಧದ ಸರಣಿ ಗೆದ್ದರೆ ಭಾರತ ತಂಡ ಚುಟುಕು ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಲಿದೆ. ಮೊದಲ ಪಂದ್ಯ ಸೋತು ಎರಡನೇ ಸ್ಥಾನಕ್ಕೆ ಕುಸಿದಿರುವ ನ್ಯೂಜಿಲೆಂಡ್ ಬಳಗ ನಾಲ್ಕನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.