ADVERTISEMENT

ಪತ್ನಿಯನ್ನು ಕಪಾಟಿನಲ್ಲಿ ಮುಚ್ಚಿಟ್ಟಿದ್ದ ಸಕ್ಲೇನ್!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:20 IST
Last Updated 16 ಫೆಬ್ರುವರಿ 2011, 18:20 IST

ಕರಾಚಿ (ಪಿಟಿಐ):   ಇಂಗ್ಲೆಂಡ್‌ನಲ್ಲಿ 1999ರಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಹಿಂದಿನ ರಾತ್ರಿ ಪಾಕಿಸ್ತಾನದ ಸ್ಪಿನ್ನರ್ ಸಕ್ಲೇನ್ ಮುಸ್ತಾಕ್ ತಮ್ಮ ಪತ್ನಿ ಯನ್ನು ಕೋಣೆಯ ಕಪಾಟಿನಲ್ಲಿ ಬಚ್ಚಿಟ್ಟದ್ದರಂತೆ!

ಈ ರಹಸ್ಯವನ್ನು ಬಯಲು ಮಾಡಿದ್ದು ಸ್ವತಃ ಸಕ್ಲೇನ್. ಸುದ್ದಿ ಸಂಸ್ಥೆಯ ಮುಂದೆ ಈ ಗುಟ್ಟನ್ನು ಹೇಳಿದ ಸಕ್ಲೇನ್, “ ಟೂರ್ನಿಯಲ್ಲಿ ತಂಡವು ಸೂಪರ್‌ಸಿಕ್ಸ್ ಹಂತಕ್ಕೆ ಪ್ರವೇಶಿಸಿದ ಕೂಡಲೇ ತಂಡದ ಎಲ್ಲ ಆಟಗಾರರೂ ತಮ್ಮ ಪತ್ನಿ ಮತ್ತು ಮಕ್ಕಳನ್ನು ಮರಳಿ ಪಾಕ್‌ಗೆ ಕಳಿಸಬೇಕೆಂದು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಸೂಚಿಸಿತ್ತು.

ಆದರೆ ನಾನು ಬ್ರಿಟಿಷ್ ನಾಗರಿಕತ್ವದ ಸನಾಳನ್ನು ಮದುವೆಯಾಗಿ ಬಹಳ ದಿನ ಕಳೆದಿರಲಿಲ್ಲ. ಅದಕ್ಕಾಗಿ ಸೂಪರ್ ಸಿಕ್ಸ್ ಹಂತದಲ್ಲಿ ತಂಡ ಉಳಿದುಕೊಳ್ಳುವ ಹೋಟೆಲ್‌ಗಳ ಮೊದಲೇ ಅವಳಿಗೆ ಕೊಟ್ಟಿದ್ದೆ. ತಂಡ ತಲುಪುವ ಮೊದಲೇ ಅವಳು ಆ ಹೋಟೆಲ್‌ನಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿರುತ್ತಿದ್ದಳು. ಫೈನಲ್ ಪಂದ್ಯದ ಮುನ್ನಾದಿನದ ರಾತ್ರಿ ನನ್ನ ರೂಮಿನಲ್ಲಿ ಅವಳೊಂದಿಗೆ ಮಾತನಾಡುತ್ತ ಕುಳಿತಿದ್ದಾಗ, ತಂಡದ ವ್ಯವಸ್ಥಾಪಕ ಡಾ. ಜಾಫರ್ ಅಲ್ತಾಫ್ ಮತ್ತು ಸಹ ವ್ಯವಸ್ಥಾಪಕ ಮಸೂದ್ ಚಿಸ್ತಿ ಬಾಗಿಲು ತಟ್ಟಿದರು.

ಪ್ರತಿದಿನ ರಾತ್ರಿ ಎಲ್ಲರ ಕೋಣೆಗ ಳನ್ನೂ ಪರಿಶೀಲಿಸಲು ಅವರು ಬರುತ್ತಿದ್ದರು. ಅವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಶಿಸ್ತಿನ ಕ್ರಮ ಎದುರಿ ಸಲು ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಕೋಣೆಯಲ್ಲಿದ್ದ ದೊಡ್ಡ ಕಪಾಟಿನಲ್ಲಿ ಕೂಡಿ ಹಾಕಿ ಹೊರಗಿನಿಂದ ಕೀಲಿ ಹಾಕಿದೆ” ಎಂದು ವಿವರಿಸಿದರು. “ಆದರೆ ವ್ಯವಸ್ಥಾಪ ಕರು ಹೋದ ಕೂಡಲೇ ಅವಳನ್ನು ಬಿಡುಗಡೆ ಮಾಡುವ ಯೋಚನೆ ಫಲಿಸಲಿಲ್ಲ. ಇದರಿಂದಾಗಿ ಅವಳು ಬಹಳ ಹೊತ್ತು ಕಪಾಟಿನಲ್ಲಿಯೇ ಇರಬೇಕಾಯಿತು. ವ್ಯವಸ್ಥಾಪಕರು ಹೋದ ಕೂಡಲೇ ತಂಡದ ಕೋಚ್ ರಿಚರ್ಡ್ ಪೈಬಸ್ ರೂಮಿನೊಳಗೆ ಬಂದರು. ಬಹಳ ಹೊತ್ತು ಮಾತನಾಡಿದ ಅವರು ಹೋದ ಮೇಲೆ ಮೊಹಮ್ಮದ್ ಯುಸೂಫ್ ಮತ್ತು ಅಜರ್ ಮೆಹಮೂದ್ ಬಂದರು. ಈ ಸಂದರ್ಭದಲ್ಲಿ ನನಗೆ ನನ್ನ ಹೆಂಡತಿಯ ಬಗ್ಗೆ ಅನು ಕಂಪ ಬಂತು. ಕೂಡಲೇ ಅವಳನ್ನು ಹೊರಗೆ ಬರುವಂತೆ ಹೇಳಿದೆ. ಇದು ನನ್ನ ತಂಡದ ಸಹ ಆಟಗಾರರಿಗೆ ಆಶ್ಚರ್ಯ ತಂದಿತ್ತು” ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.