ADVERTISEMENT

ಪದಕದ ಭರವಸೆ ಮೂಡಿಸಿರುವ ಭಾರತದ ಅಥ್ಲೀಟ್‌ಗಳು

ಪಿಟಿಐ
Published 3 ಏಪ್ರಿಲ್ 2018, 19:56 IST
Last Updated 3 ಏಪ್ರಿಲ್ 2018, 19:56 IST
ಎಂ.ಸಿ.ಮೇರಿಕೋಮ್‌, ಹೀನಾ ಸಿಧು, ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ (ಗಡಿಯಾರದ ಚಲನೆಯಲ್ಲಿ)
ಎಂ.ಸಿ.ಮೇರಿಕೋಮ್‌, ಹೀನಾ ಸಿಧು, ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ (ಗಡಿಯಾರದ ಚಲನೆಯಲ್ಲಿ)   

ಗೋಲ್ಡ್‌ ಕೋಸ್ಟ್‌: ಕಾಂಗರೂಗಳ ನಾಡಿನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸಂಭ್ರಮ ಗರಿಗೆದರಿದೆ. ಕೂಟದಲ್ಲಿ ಅತಿ ಹೆಚ್ಚು ಪದಕ ಗೆದ್ದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೆ ಸ್ಥಾನ ಹೊಂದಿದೆ. ಈ ಬಾರಿ ಪದಕದ ಸಾಧನೆ ಮಾಡಬಲ್ಲ ಭಾರತದ ಅಥ್ಲೀಟ್‌ಗಳ ಕುರಿತ ಮಾಹಿತಿ ಇಲ್ಲಿದೆ.

2014ರ ಕಾಮನ್‌ವೆಲ್ತ್‌ ಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದ ದೀಪಿಕಾ ಪಳ್ಳಿಕಲ್‌ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಕಾಂಗರೂಗಳ ನಾಡಿನಲ್ಲೂ ಮೋಡಿ ಮಾಡುವ ಕನಸು ಚಿಗುರೊಡೆದಿದೆ. ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲೂ ಇವರು ಭಾಗವಹಿಸುತ್ತಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸೌರವ್‌ ಘೋಷಾಲ್‌ ಮೇಲೆ ನಿರೀಕ್ಷೆ ಇಡಲಾಗಿದೆ.

ADVERTISEMENT

ಹೀನಾ ಸಿಧು: ಪಂಜಾಬ್‌ನ ಶೂಟರ್‌ ಹೀನಾ, ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಗೆದ್ದಿದ್ದರು. ಅವರು ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ಮತ್ತು 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮನು ಭಾಕರ್‌: 16 ವರ್ಷದ ಮನು ಹೋದ ತಿಂಗಳು ನಡೆದಿದ್ದ ಸೀನಿಯರ್‌ ವಿಶ್ವಕಪ್‌ ಸ್ಪರ್ಧೆಯಲ್ಲಿ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. 10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಅವರು ಪದಕದ ಭರವಸೆ ಮೂಡಿಸಿದ್ದಾರೆ.

ಜಿತು ರಾಯ್‌: ಸೇನೆಯಲ್ಲಿ ಕೆಲಸ ಮಾಡುತ್ತಿರುವ ಜಿತು 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಎರಡನೇ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. 2014ರ ಕೂಟದಲ್ಲಿ ಅವರು ಚಿನ್ನ ಗೆದ್ದಿದ್ದರು. 10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲೂ ಪದಕ ಜಯಿಸುವ ನೆಚ್ಚಿನ ಶೂಟರ್‌ ಎನಿಸಿದ್ದಾರೆ.

ನೀರಜ್‌ ಚೋಪ್ರಾ: ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನೀರಜ್ ಅವರು ಭಾರತದ ಭರವಸೆಯಾಗಿದ್ದಾರೆ. ಜೂನಿಯರ್‌ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ನೀರಜ್‌, ಹೋದ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು.

ಸೀಮಾ ಪೂನಿಯಾ: ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಜಯಿಸಿದ್ದ ಭಾರತದ ಮಹಿಳಾ ಡಿಸ್ಕಸ್‌ ಥ್ರೋ ಸ್ಪರ್ಧಿ ಸೀಮಾ, ಗೋಲ್ಡ್‌ ಕೋಸ್ಟ್‌ನಲ್ಲಿ ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಹೋದ ತಿಂಗಳು ನಡೆದಿದ್ದ ಫೆಡರೇಷನ್‌ ಕಪ್‌ನಲ್ಲಿ ಸೀಮಾ 61.05 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದು ಕೂಟ ದಾಖಲೆ ನಿರ್ಮಿಸಿದ್ದರು.

ತೇಜಸ್ವಿನ್‌ ಶಂಕರ್‌: ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ ಶಂಕರ್‌ ಕಣಕ್ಕಿಳಿಯುತ್ತಿದ್ದಾರೆ. ಫೆಡರೇಷನ್‌ ಕಪ್‌ನಲ್ಲಿ ಅವರು ಚಿನ್ನ ಜಯಿಸಿದ್ದರು. 2.28 ಮೀಟರ್ಸ್‌ ಎತ್ತರ ಜಿಗಿದು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮ ಪಡಿಸಿಕೊಂಡಿದ್ದರು.

ಎಂ.ಸಿ. ಮೇರಿ ಕೋಮ್‌: ಭಾರತದ ಶ್ರೇಷ್ಠ ಮಹಿಳಾ ಬಾಕ್ಸರ್‌ಗಳಲ್ಲಿ ಮೇರಿ ಕೋಮ್‌ ಕೂಡ ಒಬ್ಬರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ ಗೆದ್ದ ಹಿರಿಮೆ ಹೊಂದಿದ್ದಾರೆ. 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅವರು ಕಾಮನ್‌ವೆಲ್ತ್‌ನಲ್ಲಿ ಚೊಚ್ಚಲ ಪದಕದ ಆಸೆ ಹೊಂದಿದ್ದಾರೆ. ಅವರಿಗೆ ಈಗ 35 ವರ್ಷ.

ವಿಕಾಸ್‌ ಕೃಷ್ಣನ್‌: ವಿಕಾಸ್‌ ಅವರು ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಅವರು ಪುರುಷರ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಫೆಬ್ರುವರಿಯಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ವಿಕಾಸ್‌ ಚಿನ್ನಕ್ಕೆ ಕೊರಳೊಡ್ಡಿದ್ದರು.

ಅಮಿತ್‌ ಪಂಗಲ್‌: ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದ ಅಮಿತ್‌, ಈ ಬಾರಿ ಕಾಮನ್‌ವೆಲ್ತ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಪುರುಷರ 49 ಕೆ.ಜಿ. ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ.

ಪಿ.ವಿ.ಸಿಂಧು: ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಸಿಂಧು, ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಹೊಂದಿರುವ ಸಿಂಧು,  ಹೋದ ಬಾರಿ ಕಂಚು ಜಯಿಸಿದ್ದರು.

ಸೈನಾ ನೆಹ್ವಾಲ್‌: 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಚಿನ್ನ ಗೆದ್ದು ಭಾರತದ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಭಾಷ್ಯ ಬರೆದಿದ್ದ ಸೈನಾ ಕೂಡ ಪದಕದ ಕನಸು ಹೊತ್ತಿದ್ದಾರೆ. ಗಾಯದ ಕಾರಣ ಅವರು 2014ರ ಕೂಟದಲ್ಲಿ ಭಾಗವಹಿಸಿರಲಿಲ್ಲ.

ಕೆ.ಶ್ರೀಕಾಂತ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ ಕಣ ಕ್ಕಿಳಿಯುತ್ತಿದ್ದಾರೆ. ಶ್ರೀಕಾಂತ್‌ ಅವರು ಹೋದ ವರ್ಷ ಸತತ ನಾಲ್ಕು ಸೂಪರ್‌ ಸೀರಿಸ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದರು. 2014ರ ಕೂಟದಲ್ಲಿ ಕ್ವಾರ್ಟರ್‌ನಲ್ಲಿ ಸೋತಿದ್ದರು.

ಸುಶೀಲ್‌ ಕುಮಾರ್‌: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಹೆಗ್ಗಳಿಕೆ ಸುಶೀಲ್‌ ಅವರದ್ದು. ಗ್ಲಾಸ್ಗೊದಲ್ಲಿ ಚಿನ್ನ ಜಯಿಸಿದ್ದ ಅವರು ಈ ಬಾರಿ ಪುರುಷರ 74 ಕೆ.ಜಿ. ಫ್ರೀ ಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಸಾಕ್ಷಿ ಮಲಿಕ್‌: ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌. ಹೋದ ಬಾರಿ ಬೆಳ್ಳಿ ಗೆದ್ದಿದ್ದ ಅವರು ಗೋಲ್ಡ್‌ ಕೋಸ್ಟ್‌ನಲ್ಲಿ 62 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಅಖಾಡಕ್ಕೆ ಇಳಿಯುತ್ತಿದ್ದಾರೆ.

ವಿನೇಶಾ ಪೋಗಟ್‌: ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ವಿನೇಶಾ ಚಿನ್ನದ ಭರವಸೆ ಮೂಡಿಸಿದ್ದಾರೆ. 2014ರ ಕೂಟದಲ್ಲಿ ಅವರು 48 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಗೆ ಕೊರಳೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.