ADVERTISEMENT

ಪುಣೆ ವಾರಿಯರ್ಸ್ ಜಯಭೇರಿ; ಮಿಂಚಿದ ಸ್ಟೀವನ್ ಸ್ಮಿತ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಪುಣೆ (ಪಿಟಿಐ): ಜೆಸ್ಸಿ ರೈಡರ್ (ಅಜೇಯ 73, 56 ಎಸೆತ, 7 ಬೌಂ, 1 ಸಿಕ್ಸರ್) ಮತ್ತು ಸ್ಟೀವನ್ ಸ್ಮಿತ್ (ಅಜೇಯ 44, 22 ಎಸೆತ, 4 ಬೌಂ, 3 ಸಿಕ್ಸರ್) ಅವರ ಆಕರ್ಷಕ ಆಟದ ನೆರವಿನಿಂದ ಪುಣೆ ವಾರಿಯರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಪಡೆಯಿತು.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 155 ರನ್ ಪೇರಿಸಿತು. ಸೌರವ್ ಗಂಗೂಲಿ ನೇತೃತ್ವದ ಪುಣೆ ವಾರಿಯರ್ಸ್ 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 156 ರನ್ ಗಳಿಸಿ ಜಯ ಸಾಧಿಸಿತು.

ಮುರಿಯದ ನಾಲ್ಕನೇ ವಿಕೆಟ್‌ಗೆ 6.4 ಓವರ್‌ಗಳಲ್ಲಿ 66 ರನ್‌ಗಳ ಜೊತೆಯಾಟ ನೀಡಿದ ರೈಡರ್ ಮತ್ತು ಸ್ಮಿತ್ ವಾರಿಯರ್ಸ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ವಾರಿಯರ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 10 ರನ್‌ಗಳು ಬೇಕಿದ್ದವು. ಯೋಮಹೇಶ್ ಎಸೆದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ ಸ್ಮಿತ್ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಈ ಜಯದ ಮೂಲಕ ಗಂಗೂಲಿ ಬಳಗ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕಳೆದ ಬಾರಿಯ ಚಾಂಪಿಯನ್ ಸೂಪರ್ ಕಿಂಗ್ಸ್‌ಗೆ ಎದುರಾದ ಮೂರನೇ ಸೋಲು ಇದು.ಮಿಂಚಿದ ಪ್ಲೆಸಿಸ್, ಜಡೇಜ: ಮೊದಲು ಬ್ಯಾಟ್ ಮಾಡಿದ ಸೂಪರ್ ಕಿಂಗ್ಸ್ ತಂಡ ಫಾಪ್ ಡು ಪ್ಲೆಸಿಸ್ (43, 33 ಎಸೆತ, 5 ಬೌಂ, 2 ಸಿಕ್ಸರ್) ಹಾಗೂ ರವೀಂದ್ರ ಜಡೇಜ (44, 26 ಎಸೆತ, 4 ಬೌಂ, 2 ಸಿಕ್ಸರ್) ಉತ್ತಮ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಕಲೆಹಾಕಿತ್ತು.

ಎಡಗೈ ವೇಗಿ ಆಶೀಶ್ ನೆಹ್ರಾ ಅವರ ಮೊದಲ ಓವರ್‌ನಲ್ಲಿಯೇ ಪ್ಲೆಸಿಸ್ 18 ರನ್ ಚಚ್ಚಿದರು. ಪ್ಲೆಸಿಸ್ ಹಾಗೂ ಮುರಳಿ ವಿಜಯ್ ಮೊದಲ ವಿಕೆಟ್‌ಗೆ 43 ರನ್‌ಗಳನ್ನು ಕಲೆ ಹಾಕಿದರು. ನಂತರ ನಾಲ್ಕನೇ ವಿಕೆಟ್‌ಗೆ ಜೊತೆಯಾದ ದೋನಿ (26, 28ಎಸೆತ, 1ಬೌಂಡರಿ) ಹಾಗೂ ಜಡೇಜ ಕೇವಲ 45 ಎಸೆತಗಳಲ್ಲಿ 61 ರನ್‌ಗಳನ್ನು ಕಲೆ ಹಾಕಿದರು.
 
ಇವರ ವೇಗದ ಬ್ಯಾಟಿಂಗ್‌ನಿಂದ ಚೆನ್ನೈ ತಂಡ 150 ರನ್‌ಗಳ  ಗಡಿ ದಾಟಿತು. ಕೇವಲ 26 ಎಸೆತಗಳಲ್ಲಿ 44 ರನ್ ಕಲೆ ಹಾಕಿದ ಜಡೇಜ ಎದುರಾಳಿ ಬೌಲರ್‌ಗಳ ಬೆವರು ಇಳಿಸಿದರು.ಆದರೆ `ಪಂದ್ಯಶ್ರೇಷ್ಠ~ ರೈಡರ್ ಬ್ಯಾಟಿಂಗ್ ಮುಂದೆ ಜಡೇಜ ಹಾಗೂ ಪ್ಲೆಸಿಸ್ ಆಟಕ್ಕೆ ಬೆಲೆಯಿಲ್ಲದಾಯಿತು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.