ADVERTISEMENT

ಪೂಜಾರ ಶತಕ; ಭಾರತ ಮೇಲುಗೈ

ಕ್ರಿಕೆಟ್‌: ಪ್ರವಾಸಿ ಆಟಗಾರರ ಅಮೋಘ ಪ್ರದರ್ಶನ; ಸೋಲಿನ ಭಯದಲ್ಲಿ ಆತಿಥೇಯರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಜೋಹಾನ್ಸ್‌ಬರ್ಗ್‌: ಈ ರೀತಿ ಆಗಬಹುದು ಎಂದು ಆತಿಥೇಯ ದಕ್ಷಿಣ ಆಫ್ರಿಕಾ ತಂಡದವರು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅಷ್ಟೇ ಏಕೆ? ವಿದೇಶಿ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಈ ರೀತಿ ಪ್ರದರ್ಶನ ನೀಡುತ್ತೇವೆ ಎಂಬ ಪೂರ್ಣ ವಿಶ್ವಾಸ ಭಾರತದ ಆಟಗಾರರಿಗೇ ಇರಲಿಲ್ಲ!

ಆದರೆ ವಾಂಡರರ್ಸ್‌ ಕ್ರೀಡಾಂಗಣ ದಲ್ಲಿ ಅದ್ಭುತ ಆಟವೊಂದು ಮೂಡಿಬಂದಿದೆ. ವೇಗ, ಬೌನ್ಸರ್‌ ಹಾಗೂ ಶಾರ್ಟ್‌ ಪಿಚ್‌ ಎಸೆತಗಳ ಮೂಲಕ ತಮ್ಮನ್ನು ಅಗ್ನಿಪರೀಕ್ಷೆಗೆ ಒಳಪಡಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾದವರಿಗೆ ದೋನಿ ಬಳಗ ದೊಡ್ಡ ಆಘಾತ ನೀಡುವ ಹಂತದಲ್ಲಿದೆ.

ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮೂರನೇ ದಿನ ಭಾರತ ತಂಡದವರು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿದ್ದಾರೆ. ಈ ಮೂಲಕ 320 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದ್ದಾರೆ.

ಡೇಲ್‌ ಸ್ಟೇನ್‌, ವೆರ್ನಾನ್‌ ಫಿಲ್ಯಾಂಡರ್‌ ಅವರಂಥ ಪ್ರಚಂಡ ವೇಗಿಗಳಿಗೆ ಸೆಡ್ಡು ಹೊಡೆದಿರುವ ಚೇತೇಶ್ವರ ಪೂಜಾರ (ಬ್ಯಾಟಿಂಗ್‌ 135, 221 ಎ, 18 ಬೌಂ.) ಹಾಗೂ ವಿರಾಟ್‌ ಕೊಹ್ಲಿ (ಬ್ಯಾಟಿಂಗ್‌ 77) ಅವರ ಅಮೋಘ ಆಟ ಇದಕ್ಕೆ ಕಾರಣ. ಹಿಂದಿನ ಪ್ರವಾಸಗಳಲ್ಲಿ ಸಂಭವಿಸಿದಂತೆ ಮೂರೇ ದಿನಗಳಲ್ಲಿ ಪಂದ್ಯ ಗೆಲ್ಲುವ ಇರಾದೆ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವೇ ಈಗ ಅಪಾಯಕ್ಕೆ ಸಿಲುಕಿದೆ.

ಜಹೀರ್‌ ಪ್ರಭಾವಿ ದಾಳಿ: ತನ್ನ ಮೊದಲ ಇನಿಂಗ್ಸ್‌ ಮೊತ್ತಕ್ಕೆ ಮತ್ತಷ್ಟು ರನ್‌ ಸೇರಿಸಬೇಕೆಂಬ ಕನಸು ಹೊಂದಿದ್ದ ಆತಿಥೇಯ ತಂಡಕ್ಕೆ ಶುಕ್ರವಾರ ಬೆಳಿಗ್ಗೆ ಆಘಾತ ನೀಡಿದ್ದು ಎಡಗೈ ವೇಗಿ ಜಹೀರ್‌ ಖಾನ್‌. ಒಂದು ವರ್ಷದ ನಂತರ ಟೆಸ್ಟ್‌ ಆಡುತ್ತಿರುವ ಅವರು ನಿಖರ ವೇಗದ ಮೂಲಕ ಹರಿಣಗಳ ನಾಡಿದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

48 ರನ್‌ ಗಳಿಸಿ ಅಜೇಯರಾಗು ಳಿದಿದ್ದ ಫಿಲ್ಯಾಂಡರ್‌ ಮೂರನೇ ದಿನ ತಮ್ಮ ಮೊತ್ತಕ್ಕೆ ಸೇರಿಸಿದ್ದು ಕೇವಲ 11 ರನ್‌. ಅವರ ವಿಕೆಟ್‌ ಪಡೆದಿದ್ದು ಜಹೀರ್‌. ಅಷ್ಟರಲ್ಲಿ ಫಿಲ್ಯಾಂಡರ್‌ (59; 86 ಎ., 7 ಬೌಂ.,) ಏಳನೇ ವಿಕೆಟ್‌ಗೆ ಪ್ಲೇಸಿಸ್‌ ಜೊತೆಗೂಡಿ 80 ರನ್‌ ಸೇರಿಸಿದರು. ಅವರು ಕ್ರೀಸ್‌ಗೆ ಬಂದಾಗ ತಂಡ 6 ವಿಕೆಟ್‌ಗೆ 146 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಫಿಲ್ಯಾಂಡರ್‌ ವಿಕೆಟ್‌ ಪತನದ ಬಳಿಕ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ ಕೊನೆಗೊಳ್ಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಕೊನೆಯ ಮೂರು ವಿಕೆಟ್‌ಗಳು 18 ರನ್‌ಗಳ ಅಂತರದಲ್ಲಿ ಪತನಗೊಂಡವು. ಆತಿಥೇಯ ತಂಡದವರು 75.3 ಓವರ್‌ಗಳಲ್ಲಿ 244 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡರು. ಜಹೀರ್‌ (88ಕ್ಕೆ4) ಹಾಗೂ ಇಶಾಂತ್‌ (79ಕ್ಕೆ4) ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. 2011ರ ಜುಲೈ ಬಳಿಕ ಭಾರತ ಮೊದಲ ಬಾರಿ ವಿದೇಶ ನೆಲದಲ್ಲಿ ಇನಿಂಗ್ಸ್‌ ಮುನ್ನಡೆ ಸಾಧಿಸಿತು.

ಆರಂಭಿಕ ವೈಫಲ್ಯ: 36 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ಆರಂಭಿಕ ಬ್ಯಾಟ್ಸ್‌ ಮನ್‌ಗಳನ್ನು ಬೇಗನೇ ಕಳೆದು ಕೊಂಡಿತು. ಶಿಖರ್‌ ಅವರ ವಿಕೆಟ್‌ ಪಡೆದ ಫಿಲ್ಯಾಂಡರ್‌ ಟೆಸ್ಟ್‌ನಲ್ಲಿ ನೂರು ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. ವೇಗವಾಗಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾ ಬೌಲರ್‌ ಎನಿಸಿದರು. ಮುರಳಿ ವಿಜಯ್‌ ವೇಗಿಗಳನ್ನು ವಿಶ್ವಾಸದಿಂದಲೇ ಎದು ರಿಸಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಷ್ಟರಲ್ಲಿ ಅವರು ಚೇತೇಶ್ವರ ಪೂಜಾರ ಜೊತೆಗೂಡಿ ಎರಡನೇ ವಿಕೆಟ್‌ಗೆ 70 ರನ್‌ ಸೇರಿಸಿದ್ದರು.

ವಿಜಯ್‌ ವಿಕೆಟ್‌ ಪತನದ ಬಳಿಕ ಜೊತೆಗೂಡಿದ್ದು ಪೂಜಾರ ಹಾಗೂ ಮೊದಲ ಇನಿಂಗ್ಸ್‌ ಹೀರೊ ವಿರಾಟ್‌ ಕೊಹ್ಲಿ. ಆಗಲೇ ಬಹಿರಂಗವಾಗಿದ್ದು ದಕ್ಷಿಣ ಆಫ್ರಿಕಾ ತಂಡದ ವೇಗಿಗಳ ಬಂಡವಾಳ. ಸ್ಟೇನ್‌, ಫಿಲ್ಯಾಂಡರ್‌ ಹಾಗೂ ಜಾಕ್‌ ಕಾಲಿಸ್‌ ಅವರನ್ನು ಇನ್ನಿಲ್ಲದಂತೆ ಕಾಡಿದರು. ಸ್ಪಿನ್ನರ್‌ಗಳಾದ ಡುಮಿನಿ ಹಾಗೂ ತಾಹಿರ್‌ ಅವರನ್ನು ದಂಡಿಸಿದರು.

ಮಾರ್ಕೆಲ್‌ಗೆ ಗಾಯ: ವಿರಾಟ್‌ ಹಾಗೂ ಪೂಜಾರ ಅವರ ಸುಂದರ ಆಟದ ನಡುವೆ ಆತಿಥೇಯರು ಮತ್ತೊಂದು ಆಘಾತಕ್ಕೆ ಒಳಗಾದರು. ವೇಗಿ ಮಾರ್ನ್‌ ಮಾರ್ಕೆಲ್‌ ಅವರು ಪಾದದ ಗಾಯಕ್ಕೆ ಒಳಗಾದರು. ಅವರು ಇನ್ನು ಈ ಪಂದ್ಯದಲ್ಲಿ ಬೌಲಿಂಗ್‌ ಮಾಡುವುದಿಲ್ಲ. ಎರಡನೇ ಟೆಸ್ಟ್‌ಗೆ ಲಭ್ಯರಾಗುವುದೂ ಅನುಮಾನ. ಅವರು ಬೌಲ್‌ ಮಾಡಿದ್ದು ಕೇವಲ ಎರಡು ಓವರ್‌.

ವಿದೇಶದಲ್ಲಿ ಚೊಚ್ಚಲ ಶತಕ: ಪೂಜಾರ  ವಿದೇಶಿ ನೆಲದಲ್ಲಿ ಚೊಚ್ಚಲ ಶತಕ ಗಳಿಸಿದರು. ವೇಗಿ ಸ್ಟೇಲ್‌ ಓವರ್‌ನಲ್ಲಿ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು. ಇದು ಅವರ ಆರನೇ ಶತಕ ಕೂಡ. ಮೊದಲ ಇನಿಂಗ್ಸ್‌ನಲ್ಲಿ ರನ್‌ಔಟ್‌ ಆಗಿ ನಿರಾಸೆಗೆ ಒಳಗಾಗಿದ್ದ ಅವರು ಎರಡನೇ ಇನಿಂಗ್ಸ್‌ನ ಆರಂಭದಲ್ಲಿ ತುಂಬಾ ಎಚ್ಚರಿಕೆಯಿಂದ ಆಡಿದರು. ಮೊದಲ ಅರ್ಧ ಶತಕ ಗಳಿಸಲು ಅವರು 127 ಎಸೆತ ತೆಗೆದು ಕೊಂಡರು. ಅದಕ್ಕೆ ಫಲ ಕೂಡ ಲಭಿಸಿತು.

ಎರಡನೇ ಅರ್ಧ ಶತಕವನ್ನು ಚೇತೇಶ್ವರ ಕೇವಲ 41 ಎಸೆತಗಳಲ್ಲಿ ಗಳಿಸಿದರು. ಅವರಿಗೆ ಉತ್ತಮ ಜೊತೆಯಾಟ ನೀಡಿದ ಕೊಹ್ಲಿ (ಬ್ಯಾಟಿಂಗ್‌ 77; 132 ಎ., 8 ಬೌಂ.,) ಮತ್ತೊಮ್ಮೆ ವೇಗಿಗಳ ಎದುರು ಪಾರಮ್ಯ ಮೆರೆದರು. ಅವರು ಬಿರುಸಿನ ಇನಿಂಗ್ಸ್‌ ಕಟ್ಟಿದರು. ಅವರೀಗ ಎರಡನೇ ಇನಿಂಗ್ಸ್‌ನಲ್ಲಿ ಶತಕದ ಮೇಲೆ ಕಣ್ಣಿಟ್ಟಿದ್ದಾರೆ.

ಪೂಜಾರ ಹಾಗೂ ಕೊಹ್ಲಿ ದಿನದಾಟದ ಕೊನೆಯ ಅವಧಿಯಲ್ಲಿ ವೇಗಿಗಳನ್ನು ಕಾಡಿದ ಪರಿ ಅಷ್ಟಿಷ್ಟಲ್ಲ. 4.61 ರನ್‌ರೇಟ್‌ನಲ್ಲಿ 175 ರನ್‌ ಸೇರಿಸಿದರು. ಇವರಿಬ್ಬರು ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಈಗಾಗಲೇ 191 ರನ್‌ ಸೇರಿಸಿದ್ದಾರೆ.

ಇವರ ಜೊತೆಯಾಟ ಮುರಿಯಲು ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್‌ ಸ್ಮಿತ್‌ ಹಲವು ಬದಲಾವಣೆ ಮಾಡಿದರು. ಆದರೆ ಯಶಸ್ಸು ಸಿಗಲಿಲ್ಲ. ಸ್ಟೇನ್‌ ಹಾಗೂ ಫಿಲ್ಯಾಂಡರ್‌ ಅವರ ಯಾವುದೇ ತಂತ್ರ ಫಲಿಸಲಿಲ್ಲ.

                                                             ಸ್ಕೋರ್ ವಿವರ 
ಭಾರತ: ಮೊದಲ ಇನಿಂಗ್ಸ್‌ 103 ಓವರ್‌ಗಳಲ್ಲಿ 280

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌ 75.3 ಓವರ್‌ಗಳಲ್ಲಿ 244
(ಗುರುವಾರದ ಅಂತ್ಯಕ್ಕೆ 66 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 213)
ಫಾಫ್‌ ಡು ಪ್ಲೇಸಿಸ್‌ ಸಿ ದೋನಿ ಬಿ ಜಹೀರ್ ಖಾನ್‌  20
ವೆರ್ನಾನ್‌ ಫಿಲ್ಯಾಂಡರ್‌ ಸಿ ಆರ್‌.ಅಶ್ವಿನ್‌ ಬಿ ಜಹೀರ್ ಖಾನ್‌ 59
ಡೇಲ್‌ ಸ್ಟೇನ್‌ ಸಿ ರೋಹಿತ್‌ ಶರ್ಮ ಬಿ ಇಶಾಂತ್‌ ಶರ್ಮ  10
ಮಾರ್ನ್‌ ಮಾರ್ಕೆಲ್‌ ಬಿ ಜಹೀರ್‌ ಖಾನ್‌  07
ಇಮ್ರಾನ್‌ ತಾಹಿರ್ ಔಟಾಗದೆ  00
ಇತರೆ (ಲೆಗ್‌ಬೈ–4, ವೈಡ್‌–1, ನೋಬಾಲ್‌–3)  08
ವಿಕೆಟ್‌ ಪತನ: 1–37 (ಪೀಟರ್ಸನ್‌; 13.1); 2–130 (ಆಮ್ಲಾ; 38.1); 3–130 (ಕಾಲಿಸ್‌; 38.2); 4–130 (ಸ್ಮಿತ್‌; 39.3); 5–145 (ಡುಮಿನಿ; 44.1); 6–146 (ಡಿವಿಲಿಯರ್ಸ್‌; 44.3); 7–226 (ಫಿಲ್ಯಾಂಡರ್‌; 69.1); 8–237 (ಸ್ಟೇನ್‌; 72.3); 9–239 (ಪ್ಲೇಸಿಸ್‌; 73.5); 10–244 (ಮಾರ್ಕೆಲ್‌; 75.3)
ಬೌಲಿಂಗ್‌: ಜಹೀರ್‌ ಖಾನ್‌ 26.3–6–88–4 (ವೈಡ್‌–1), ಮೊಹಮ್ಮದ್‌ ಶಮಿ 18–3–48–2, ಇಶಾಂತ್‌ ಶರ್ಮ 25–5–79–4(ನೋಬಾಲ್‌–3), ಆರ್‌.ಅಶ್ವಿನ್‌ 6–0–25–0

ಭಾರತ: ಎರಡನೇ ಇನಿಂಗ್ಸ್‌ 78 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 284
ಶಿಖರ್‌ ಧವನ್‌ ಸಿ ಜಾಕ್‌ ಕಾಲಿಸ್‌ ಬಿ ವೆರ್ನಾನ್‌ ಫಿಲ್ಯಾಂಡರ್‌ 15
ಮುರಳಿ ವಿಜಯ್‌ ಸಿ ಎಬಿ ಡಿವಿಲಿಯರ್ಸ್‌ ಬಿ ಜಾಕ್‌ ಕಾಲಿಸ್‌ 39
ಚೇತೇಶ್ವರ ಪೂಜಾರ ಬ್ಯಾಟಿಂಗ್‌  135
ವಿರಾಟ್‌ ಕೊಹ್ಲಿ ಬ್ಯಾಟಿಂಗ್‌  77
ಇತರೆ (ಬೈ–5, ಲೆಗ್‌ಬೈ–5, ವೈಡ್‌–8)  18
ವಿಕೆಟ್‌ ಪತನ: 1–23 (ಧವನ್‌; 7.3); 2–93 (ವಿಜಯ್‌; 33.5)
ಬೌಲಿಂಗ್‌: ಡೇಲ್‌ ಸ್ಟೇನ್‌ 21–4–64–0 (ವೈಡ್‌–2), ವೆರ್ನಾನ್‌ ಫಿಲ್ಯಾಂಡರ್‌ 18–5–53–1 (ವೈಡ್‌–1), ಮಾರ್ನ್‌ ಮಾರ್ಕೆಲ್‌ 2–1–4–0, ಜಾಲ್‌ ಕಾಲಿಸ್‌ 14–4–51–1, ಇಮ್ರಾನ್‌ ತಾಹಿರ್‌ 11–0–55–0, ಎಬಿ ಡಿವಿಲಿಯರ್ಸ್‌ 1–0–5–0 (ವೈಡ್‌–1), ಜೀನ್‌ ಪಾಲ್‌ ಡುಮಿನಿ 11–0–42–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT