ADVERTISEMENT

ಪೇಸ್-ವೆಸ್ನಿನಾ ರನ್ನರ್ ಅಪ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಲಂಡನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಜೋಡಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋಲು ಅನುಭವಿಸಿ `ರನ್ನರ್ ಅಪ್~ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕದ ಮೈಕ್ ಬ್ರಯಾನ್ ಮತ್ತು ಲೀಸಾ ರೇಮಂಡ್ ಜೋಡಿ 6-3, 5-7, 6-4 ರಲ್ಲಿ ಭಾರತ- ರಷ್ಯಾ ಜೋಡಿಯನ್ನು ಮಣಿಸಿ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು.

ನಾಲ್ಕನೇ ಶ್ರೇಯಾಂಕ ಹೊಂದಿದ್ದ ಪೇಸ್- ವೆಸ್ನಿನಾ ಎರಡು ಗಂಟೆ ನಾಲ್ಕು ನಿಮಿಷಗಳ ಹೋರಾಟದ ಕೊನೆಯಲ್ಲಿ ಸೋಲೊಪ್ಪಿಕೊಂಡರು. ಭಾರತ- ರಷ್ಯಾ ಜೋಡಿ ಪ್ರಸಕ್ತ ಋತುವಿನಲ್ಲಿ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲಿ ಎರಡನೇ ಸಲ ನಿರಾಸೆ ಅನುಭವಿಸಿದೆ. ಜನವರಿ ತಿಂಗಳಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲೂ ಈ ಜೋಡಿಗೆ `ರನ್ನರ್ ಅಪ್~ ಸ್ಥಾನ ಲಭಿಸಿತ್ತು.

ಭಾನುವಾರ ನಡೆದ ಪಂದ್ಯದಲ್ಲಿ ವೆಸ್ನಿನಾ ಅವರ ಸರ್ವ್ ಅತ್ಯುತ್ತಮವಾಗಿತ್ತು. ಪೇಸ್ ಕೂಡಾ ಆಕರ್ಷಕ ಪ್ರದರ್ಶನ ನೀಡಿದರು. ಆದರೆ ನಿರ್ಣಾಯಕ ಘಟ್ಟದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದು ಮುಳುವಾಗಿ ಪರಿಣಮಿಸಿತು.

ಮೊದಲ ಸೆಟ್‌ನ ಐದನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿಯುವ ಅವಕಾಶ ಪೇಸ್ ಹಾಗೂ ವೆಸ್ನಿನಾಗೆ ಲಭಿಸಿತ್ತು. ಆದರೆ ಅದನ್ನು ಸದುಪಯೋಗಪಡಿಸಲು ಆಗಲಿಲ್ಲ. ಮಾತ್ರವಲ್ಲ ಪೇಸ್ ಅವರ ಮುಂದಿನ ಸರ್ವ್ ಅನ್ನು ಎದುರಾಳಿಗಳು ಬ್ರೇಕ್ ಮಾಡಿದರು.

ಅಮೆರಿಕದ ಜೋಡಿ ಸೆಟ್ ಅನ್ನು 6-3 ರಲ್ಲಿ ಗೆದ್ದುಕೊಂಡಿತು. ಪೇಸ್ ಮತ್ತು ವೆಸ್ನಿನಾ ಎರಡನೇ ಸೆಟ್ ಗೆದ್ದುಕೊಂಡು ತಿರುಗೇಟು ನೀಡಿದರು. ಈ ಸೆಟ್‌ನಲ್ಲಿ 1-3 ರಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತ- ರಷ್ಯಾ ಜೋಡಿ ಬಳಿಕ ಪುಟಿದೆದ್ದು ನಿಂತಿತು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅಮೆರಿಕ ಜೋಡಿಯ ಕೈಮೇಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.