ADVERTISEMENT

ಪೇಸ್-ಸ್ಟೆಪನಿಕ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಮಿಯಾಮಿ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನಿಕ್ ಇಲ್ಲಿ ನಡೆದ ಸೋನಿ ಎರಿಕ್ಸನ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು. ಇದು ಪೇಸ್‌ಗೆ ಡಬಲ್ಸ್‌ನಲ್ಲಿ ಲಭಿಸಿದ 50ನೇ ಪ್ರಶಸ್ತಿ. ಎಟಿಪಿ ವರ್ಲ್ಡ್ ಟೂರ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 24ನೇ ಆಟಗಾರ ಎನ್ನುವ ಗೌರವ ಪೇಸ್ ಅವರದಾಯಿತು.

ಶನಿವಾರ ರಾತ್ರಿ ಕ್ರಾಂಡನ್ ಪಾರ್ಕ್ ಕೋರ್ಟ್‌ನಲ್ಲಿ 82 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಪೇಸ್-ಸ್ಟೆಪನಿಕ್ 3-6, 6-1, 10-8ರಲ್ಲಿ ಎರಡನೆ ಶ್ರೇಯಾಂಕದ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ ಮತ್ತು ಸರ್ಬಿಯದ ಡೇನಿಯಲ್ ನೆಸ್ಟರ್ ಎದುರು ಗೆಲುವು ಸಾಧಿಸಿದರು. 

ಪೇಸ್ ಇಲ್ಲಿನ ಪ್ರಶಸ್ತಿ ಇದೇ ಮೊದಲೇನಲ್ಲ. 2011ರಲ್ಲಿ ಮಹೇಶ್ ಭೂಪತಿ ಜೊತೆ ಸೇರಿ ಇಲ್ಲಿ ಚಾಂಪಿಯನ್ ಆಗಿದ್ದರು.   ಪೇಸ್-ಸ್ಟೆಪನಿಕ್ ಜೋಡಿಗೆ ಇದು ಎರಡನೇ ಮಹತ್ವದ ಪ್ರಶಸ್ತಿ. ಆಸ್ಟ್ರೇಲಿಯಾ ಓಪನ್ ನಲ್ಲೂ ಇವರು ಪ್ರಶಸ್ತಿ ಎತ್ತಿಕೊಂಡಿದ್ದರು.

ADVERTISEMENT

`ಎರಡನೇ ಸೆಟ್ ವೇಳೆ ರಾಡೆಕ್ ನನ್ನ ಬಳಿ ಬಂದು ಸರ್ವಿಸ್‌ನಲ್ಲಿ ತಪ್ಪಾಗದಂತೆ ಎಚ್ಚರಿಕೆ ವಹಿಸುವಂತೆ ಹೇಳಿದ. ಆಗ ನಾನು ಇನ್ನಷ್ಟು ಜಾಗರೂಕತೆ ವಹಿಸಿದೆ. ಆದ್ದರಿಂದ ಗೆಲುವು ನಮ್ಮದಾಯಿತು~ ಎಂದು ಪೇಸ್ ಅಭಿಪ್ರಾಯ   ವ್ಯಕ್ತ ಪಡಿಸಿದರು.

ಪೇಸ್‌ಗೆ 50ನೇ ಪ್ರಶಸ್ತಿ:  ಬಂಗಾಳದ ಈ ಆಟಗಾರನಿಗೆ ವೃತ್ತಿ ಜೀವನದ ಡಬಲ್ಸ್‌ನಲ್ಲಿ ಲಭಿಸಿದ 50ನೇ ಪ್ರಶಸ್ತಿಯಾದ ಕಾರಣ, ಪಂದ್ಯದ ನಂತರ ಪಂದ್ಯದ ಬಗ್ಗೆ ಮಾತನಾಡುತ್ತಾ ಅವರು `ವೆರಿ ವೆರಿ ಸ್ಪೆಷಲ್~ ಎಂದರು.

`ನಾನು ಈ ಸಾಧನೆ ಮಾಡುವ ಹಾದಿಯಲ್ಲಿ ಸಾಕಷ್ಟು ಆಟಗಾರರು ಜೊತೆಯಾಗಿದ್ದಾರೆ. ಸಾಕಷ್ಟು ಕೋಚ್‌ಗಳೂ ತರಬೇತಿ ನೀಡಿದ್ದಾರೆ. ನನ್ನ ತಂದೆಗೂ ಈ ಗೌರವದಲ್ಲಿ ಪಾಲಿದೆ~ ಎಂದೂ ಪೇಸ್ ಪ್ರತಿಕ್ರಿಯಿಸಿದರು.

`ಸಾಕಷ್ಟು ಜೊತೆಗಾರರು ಬಂದು ಹೋದರೂ, ರಾಡೆಕ್ ಅತ್ಯುತ್ತಮ ಜೊತೆಗಾರ. ಈ ಸಾಧನೆಗಾಗಿ 600 ಪಂದ್ಯಗಳನ್ನುಆಡಬೇಕಾಯಿತು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.