ADVERTISEMENT

ಪೊಲೀಸರ ತಪ್ಪೇನು ಇಲ್ಲ...!

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:05 IST
Last Updated 24 ಫೆಬ್ರುವರಿ 2011, 18:05 IST

ಬೆಂಗಳೂರು: ಭಾರತ-ಇಂಗ್ಲೆಂಡ್ ಪಂದ್ಯದ ಟಿಕೆಟ್ ಕೊಳ್ಳಲು ಸಾಲಿನಲ್ಲಿ ನಿಂತು ನಂತರ ಲಾಠಿ ಏಟು ತಿಂದರೂ ಕ್ರಿಕೆಟ್ ಪ್ರೇಮಿಗಳು ಪೊಲೀಸರನ್ನು ದೂರಲಿಲ್ಲ. ಬದಲಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಕಿಡಿ ಕಾರಿದರು.

‘ಪೊಲೀಸರದ್ದೇನೂ ತಪ್ಪಿಲ್ಲ’ ಎಂದ ಅನೇಕ ಯುವಕರು ‘ಮೊದಲು ಕ್ರಿಕೆಟ್ ಸಂಸ್ಥೆಯವರು ಟಿಕೆಟ್ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು’ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಅಷ್ಟೇ ಅಲ್ಲ ‘ಡೌನ್ ಡೌನ್... ಅನಿಲ್ ಕುಂಬ್ಳೆ; ಕೆಎಸ್‌ಸಿಎ ಮುರ್ದಾಬಾದ್’ ಎಂದು ಘೋಷಣೆ ಕೂಡ ಕೂಗಿದರು.

ಲಘು ಲಾಠಿ ಪ್ರಹಾರದ ನಂತರ ಗಾಯಗೊಂಡಿದ್ದರೂ ಯುವ ಸಾಫ್ಟ್‌ವೇರ್ ಎಂಜಿನೀಯರ್ ರಮೇಶ್ ಚಿಂತಾ ‘ಪೊಲೀಸರ ತಪ್ಪೇನು ಇಲ್ಲ ಸಾರ್; ಅವರ ಕೆಲಸಾ ಮಾಡಿದ್ದಾರೆ. ಹೀಗೆ ಗದ್ದಲ ಆಗದ ಹಾಗೆ ಮಾಡಬೇಕಾಗಿದ್ದು ಕ್ರಿಕೆಟ್ ಸಂಸ್ಥೆ. ಅವರು ಸರಿಯಾಗಿ ಸಾಲು ವ್ಯವಸ್ಥೆ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ’ ಎಂದು  ಹೇಳಿದರು.

ಸಾಲು ವ್ಯವಸ್ಥೆಯು ಸರಿಯಾಗಿ ಇರಲಿಲ್ಲ ಎನ್ನುವ ಬಗ್ಗೆ ಅನೇಕ ಕ್ರಿಕೆಟ್ ಪ್ರಿಯರು ಕೋಪ ವ್ಯಕ್ತಪಡಿಸಿದರು. ಕೌಂಟರ್ ಸಮೀಪದಲ್ಲಿ ಲೈನ್‌ಗಳು ಹೇಗೆ ವಿಭಾಗ ಆಗುತ್ತವೆ ಎನ್ನುವುದನ್ನು ಅನುಸರಿಸಿ, ದೂರದವರೆಗೆ ಪಕ್ಕದ ತಡೆಗಳನ್ನು ನಿರ್ಮಿಸಬೇಕಿತ್ತು. ಆದರೆ ಹಾಗೆ ಮಾಡಿರಲಿಲ್ಲ. ಎಂಟು ಸಾಲುಗಳಲ್ಲಿ ನಿಂತರವರು ಕೊನೆಯಲ್ಲಿ ಎರಡು ಸಾಲಾಗಿ ವಿಭಾಗ ಆಗುವಲ್ಲಿ ಗೊಂದಲ ಆರಂಭವಾಯಿತು. ಇದರಿಂದಾಗ ನೂಕುನುಗ್ಗಲು ಹೆಚ್ಚಿತು ಎನ್ನುವುದು ಜನರ ಅಭಿಪ್ರಾಯ.

ಇಷ್ಟೆಲ್ಲಾ ದುಡ್ಡು ಬರುತ್ತದೆ; ಇನ್ನೊಂದಿಷ್ಟು ದೂರದವರೆಗೆ ಅಡ್ಡ ಪಟ್ಟಿಗಳು ಇರುವ ತಡೆಗಳನ್ನು ನಿರ್ಮಿಸಿದ್ದರೆ ಕ್ರಿಕೆಟ್ ಸಂಸ್ಥೆಗೆ ಏನು ಭಾರಿ ಖರ್ಚು ಆಗುತ್ತಿರಲಿಲ್ಲ’ ಎಂದು ಹೇಳಿದ ಕಾಲೇಜು ವಿದ್ಯಾರ್ಥಿ ಸಂತಾನ ಮೂರ್ತಿ.
ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದು ಕೌಂಟರ್‌ಗಳ ಹತ್ತಿರ ಇನ್ನಷ್ಟು ಗದ್ದಲ ಹೆಚ್ಚಾಗಬಾರದು ಹಾಗೂ ನೂಕುನುಗ್ಗಲಿನಿಂದ ಅಹಿತಕರ ಘಟನೆ ನಡೆಯಬಾರದು ಎನ್ನುವುದಕ್ಕೆ. ಆದ್ದರಿಂದ ಪೊಲೀಸರನ್ನು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ದೂರಲಿಲ್ಲ. ಬೆರಳು ತೋರಿಸಿದ್ದು ಕ್ರಿಕೆಟ್ ಸಂಸ್ಥೆಯ ಕಡೆಗೆ ಮಾತ್ರ. ಪಂದ್ಯ ಸಂಘಟಿಸುವ ಹೊಣೆ     ಹೊತ್ತ ಸಂಸ್ಥೆಯು ಟಿಕೆಟ್ ಮಾರಾಟವನ್ನೂ ವ್ಯವಸ್ಥಿತವಾಗಿ ಮಾಡಬೇಕಿತ್ತು ಎನ್ನುವುದು ಜನರ ಒಟ್ಟಾಭಿಪ್ರಾಯ.

‘ಕ್ರಿಕೆಟಿಗರಾಗಿ ಕುಂಬ್ಳೆ ಹಾಗೂ ಶ್ರೀನಾಥ್ ಅವರು ಅನುಭವ ಹೊಂದಿರಬಹುದು. ಆದರೆ ಆಡಳಿತ ಅವರಿಗೆ ಕಷ್ಟವಾಗಿದೆ. ಆದ್ದರಿಂದಲೇ ಟಿಕೆಟ್ ಮಾರಾಟದಲ್ಲಿ ಇಷ್ಟೊಂದು ಗೊಂದಲ ಆಗಿದ್ದು’ ಎಂದು ದೈಹಿಕ ಶಿಕ್ಷಕರೂ ಆಗಿರುವ ಕ್ರಿಕೆಟ್ ಪ್ರೇಮಿ ನಾಗರಾಜ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.