ADVERTISEMENT

ಪೋಲ್‌ವಾಲ್ಟ್: ಖ್ಯಾತಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:40 IST
Last Updated 19 ಫೆಬ್ರುವರಿ 2011, 18:40 IST

ರಾಂಚಿ: ಕರ್ನಾಟಕದ ಖ್ಯಾತಿ ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.ಬಿರ್ಸಾ ಮುಂಡಾ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ವಿಭಾಗದ ಸ್ಪರ್ಧೆಯಲ್ಲಿ ಖ್ಯಾತಿ 3.65 ಮೀಟರ್ ಎತ್ತರ ಜಿಗಿದರು. ಇದು ಕರ್ನಾಟಕಕ್ಕೆ ಅಥ್ಲೆಟಿಕ್ಸ್‌ನಲ್ಲಿ ದೊರೆತ ಮೂರನೇ ಚಿನ್ನದ ಪದಕ. ಆದರೆ ಮಹಿಳೆಯರ ರಿಲೇಯಲ್ಲಿ ರಾಜ್ಯ ತಂಡ ನಿರಾಸೆ ಅನುಭವಿಸಿತು.

ರಿಚಾ, ಖಾಡೆ ಅತ್ಯುತ್ತಮ ಈಜುಪಟುಗಳು: ನವದೆಹಲಿಯ ರಿಚಾ ಮಿಶ್ರಾ ಹಾಗೂ ಮಹಾರಾಷ್ಟ್ರದ ವೀರ್‌ಧವಳ್ ಖಾಡೆ ಅವರು ಕ್ರಮವಾಗಿ ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ಅತ್ಯುತ್ತಮ ಈಜುಪಟುಗಳು ಎನಿಸಿದ್ದಾರೆ.

ಅಷ್ಟು ಮಾತ್ರವಲ್ಲದೇ, ಕ್ರೀಡಾಕೂಟದ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಪಡೆಯುವ ಹಾದಿಯಲ್ಲಿದ್ದಾರೆ.ಆದರೆ ರಿಚಾಗೆ ಕರ್ನಾಟಕ ನಿಶಾ ಮಿಲೆಟ್ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. 11 ಚಿನ್ನದ ಪದಕ ಗೆದ್ದು ದಾಖಲೆ ಸರಿಗಟ್ಟಿದ್ದ ರಿಚಾ ಮತ್ತೊಂದು ಚಿನ್ನದ ಪದಕ ಗೆಲ್ಲಲು ವಿಫಲರಾದರು.ಅವರು ಒಟ್ಟು 16 ಪದಕ (11 ಚಿನ್ನ, 4 ಬೆಳ್ಳಿ. 1 ಕಂಚು) ಜಯಿಸಿದರು. ಖಾಡೆ ಎಂಟು ಚಿನ್ನದ ಪದಕ ಗೆದ್ದರು.

ರೋಹಿತ್‌ಗೆ ಬೆಳ್ಳಿ: ಕರ್ನಾಟಕದ ರೋಹಿತ್ ಆರ್.ಹವಲ್ದಾರ್ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. 3ಮೀ. ಸ್ಪ್ರಿಂಗ್‌ಬೋರ್ಡ್ ಡೈವಿಂಗ್‌ನಲ್ಲಿ ಕರಿಶ್ಮಾ ಎಂ.ಮೋಹಿತೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.ಈ ಮೂಲಕ ಕರ್ನಾಟಕ ಕ್ರೀಡಾಕೂಟದ ಈಜು ವಿಭಾಗದಲ್ಲಿ ಒಟ್ಟು 10 ಚಿನ್ನ, 13 ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. 17 ಚಿನ್ನ, 15 ಬೆಳ್ಳಿ ಹಾಗೂ 15 ಕಂಚಿನ ಪದಕ ಗೆದ್ದ ಮಹಾರಾಷ್ಟ್ರ ಸಮಗ್ರ ಚಾಂಪಿಯನ್ ಪಟ್ಟ ಪಡೆಯಿತು. 11 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕ ಜಯಿಸಿದ ದೆಹಲಿ ರನ್ನರ್ ಅಪ್ ಸ್ಥಾನ ಪಡೆಯಿತು.

ಫಲಿತಾಂಶ (ಅಥ್ಲೆಟಿಕ್ಸ್): ಮಹಿಳೆಯರ ವಿಭಾಗ: ಪೋಲ್‌ವಾಲ್ಟ್: ಖ್ಯಾತಿ (ಕರ್ನಾಟಕ; 3.65 ಮೀ. ಎತ್ತರ)-1. ತಪೋಸಿ ನಂದಿ (ಜಾರ್ಖಂಡ್; 3.50 ಮೀ.)-2. ಕೆ.ಸಿ.ದಿಜಾ (ಕೇರಳ; 3.30 ಮೀ.)-3.

ಈಜು: ಪುರುಷರ ವಿಭಾಗ: 100 ಮೀ. ಫ್ರೀಸ್ಟೈಲ್: ವೀರ್‌ಧವಳ್ ಖಾಡೆ (ಮಹಾರಾಷ್ಟ್ರ; 51.30 ಸೆ.)-1. ರೋಹಿತ್ ಆರ್.ಹವಲ್ದಾರ್ (ಕರ್ನಾಟಕ; 54.02 ಸೆ.)-2, ಜಯವಂತ್ ವಿಜಯ್ ಕುಮಾರ್ (ತಮಿಳುನಾಡು: 54.41 ಸೆ.)-3.
ವಾಟರ್ ಪೋಲೊ (ಮೂರನೇ ಸ್ಥಾನಕ್ಕೆ): ಮಹಿಳೆಯರ ವಿಭಾಗ: ಕರ್ನಾಟಕ (3) ವಿರುದ್ಧ ಮಹಾರಾಷ್ಟ್ರಕ್ಕೆ (6 ಪಾಯಿಂಟ್) ಜಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.