ADVERTISEMENT

ಪ್ರೇರಣೆ ನೀಡುವಂಥ ಕ್ರಿಕೆಟ್ ಪ್ರೇಮಿಗಳ ಉತ್ಸಾಹ...!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:50 IST
Last Updated 18 ಫೆಬ್ರುವರಿ 2011, 18:50 IST

ಸಾಕಷ್ಟು ಒತ್ತಡದ ಚಟುವಟಿಕೆಯಿಂದ ಕೂಡಿದ ವಾರವಿದು. ನಾಲ್ಕಾರು ದಿನಗಳಿಂದ ಸಾಕಷ್ಟು ಪ್ರಯಾಣ ಮಾಡಬೇಕಾಯಿತು. ಉದ್ಘಾಟನಾ ಸಮಾರಂಭಕ್ಕಾಗಿ ಬಾಂಗ್ಲಾದೇಶಕ್ಕೆ ಹೋಗಿ ಮತ್ತೆ ಈಗ ಸ್ವದೇಶಕ್ಕೆ ಪ್ರಯಾಣ. ಎರಡು ವಿಮಾನಗಳನ್ನು ಬದಲಿಸಿ ಕೊಲಂಬೊ ತಲುಪಿ, ಅಲ್ಲಿಂದ ಸೇನಾಪಡೆಯ ಹೆಲಿಕಾಪ್ಟರ್‌ನಲ್ಲಿ ಹಂಬಂಟೋಟಾ ತಲುಪಿದ್ದಾಯಿತು. ಒತ್ತಡ ಎನಿಸಿದರೂ ಈ ಓಡಾಟವು ರೋಮಾಂಚನವನ್ನೂ ನೀಡಿತು. ಇದೊಂದು ವಿಶೇಷ ಅನುಭವವೂ ಆಗಿದೆ.

ಬಂಗಬಂಧು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸಮಾರಂಭವು 2011ರ ವಿಶ್ವಕಪ್‌ಗೆ ಅದ್ಭುತವಾದ ಚಾಲನೆ ಸಿಗುವಂತೆ ಮಾಡಿತು. ವರ್ಣರಂಜಿತ ಸಮಾರಂಭವು ಕ್ರಿಕೆಟ್ ಪ್ರೇಮಿಗಳನ್ನು ಮಾತ್ರವಲ್ಲ ಆಟಗಾರರೂ ಉಲ್ಲಾಸಗೊಳ್ಳುವಂತೆ ಮಾಡಿತು. ಹರ್ಷಪೂರ್ಣ ವಾತಾವರಣದೊಂದಿಗೆ ದೊಡ್ಡದೊಂದು ಟೂರ್ನಿಗೆ ಮುನ್ನುಡಿ! ಪ್ರೇರಣೆ ನೀಡುವಂಥ ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಕಂಡು ಕ್ರಿಕೆಟಿಗರ ಮನಸ್ಸಿನಲ್ಲಿ ಸಂತಸದ ಹೊನಲು ಹರಿದಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕ್ರಿಕೆಟ್ ಪ್ರಿಯರನ್ನು ನೋಡಿದಾಗ ವ್ಯಕ್ತಪಡಿಸಲು ಸಾಧ್ಯವಿಲ್ಲದಂಥ ಖುಶಿ. ಏಷ್ಯಾದ ರಾಷ್ಟ್ರಗಳಲ್ಲಿ ನಡೆಯುವ ಈ ಟೂರ್ನಿಯ ಮಹತ್ವವೇನು ಎನ್ನುವುದನ್ನು ಉದ್ಘಾಟನಾ ಸಮಾರಂಭವು ಸ್ಪಷ್ಟವಾಗಿ ಬಿಂಬಿಸಿತು. ಸಂಸ್ಕೃತಿ ಹಾಗೂ ಕಲೆಯ ಪ್ರವಾಹವೇ ಅಲ್ಲಿ ಹರಿಯಿತು.

ಇದೇ ಉತ್ಸಾಹವು ಮುಂದುವರೆಯುತ್ತದೆ ಎನ್ನುವ ವಿಶ್ವಾಸ ನನಗಂತೂ ಇದೆ. ಟೂರ್ನಿಯಲ್ಲಿ ಆಡಲಿರುವ ಎಲ್ಲ ತಂಡಗಳೂ ಪ್ರಬಲ ಪೈಪೋಟಿ ನಡೆಸುವ ಮೂಲಕ ರೋಮಾಂಚನವನ್ನು ಹೆಚ್ಚಿಸಬೇಕು. ಕ್ಷೇತ್ರದಲ್ಲಿ ಆಟಗಾರರು ಉನ್ನತ ಮಟ್ಟದ ಪ್ರದರ್ಶನ ನೀಡಿದಾಗಲೇ ವಿಶ್ವಕಪ್ ಸ್ಮರಣೀಯ ಎನಿಸುತ್ತದೆ. ಕೊನೆಯಲ್ಲಿ ನೆನಪಿನಲ್ಲಿ ಉಳಿಯುವುದು ಆಟದ ಸೊಬಗು ಹಾಗೂ ಆಟಗಾರರ ಅಬ್ಬರ ಮಾತ್ರ. ನಮ್ಮ ತಂಡದ ಎಲ್ಲ ಕ್ರಿಕೆಟಿಗರೂ ಈ ಬಾರಿಯ ವಿಶ್ವಕಪ್ ಅನ್ನು ಅತ್ಯಂತ ಪ್ರಭಾವಿ ಆಟದ ವೇದಿಕೆಯಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ಆ ಮೂಲಕ ನೆನಪಿನಲ್ಲಿ ಗಟ್ಟಿಯಾಗಿ ನಿಲ್ಲುವಂಥ ಟೂರ್ನಿ ಇದಾಗುವಂತೆ ಮಾಡುವುದು ನಮ್ಮೆಲ್ಲರ ಉದ್ದೇಶ.

ನನಗೆ ಬಂಗಬಂಧು ಕ್ರೀಡಾಂಗಣದಲ್ಲಿ ಅಚ್ಚರಿಯೊಂದು ಕಾಣಿಸಿತು. ಶ್ರೀಲಂಕಾದಿಂದ ಹೊರಗೆ ನಡೆಯುತ್ತಿರುವ ಉದ್ಘಾಟನಾ ಸಮಾರಂಭದಲ್ಲಿ ನಮ್ಮ ತಂಡವನ್ನು ಸ್ವಾಗತಿಸಲು ಭಾರಿ ಸಂಖ್ಯೆಯಲ್ಲಿ ಸಿಂಹಳೀಯರು ಇರುವುದಿಲ್ಲ ಎಂದುಕೊಂಡಿದ್ದೆ. ಆದರೆ ನಾನು ಸೈಕಲ್ ರಿಕ್ಷಾದಲ್ಲಿ ಕುಳಿತು ಕ್ರೀಡಾಂಗಣವನ್ನು ಪ್ರವೇಶಿಸಿದಾಗ ಬೆರಗಾದೆ. ಕ್ರೀಡಾಂಗಣದ ಎಲ್ಲ ಗ್ಯಾಲರಿಗಳಲ್ಲಿ ಶ್ರೀಲಂಕಾ ಧ್ವಜ ಕಣ್ಣು ಸೆಳೆಯಿತು.

ದೊಡ್ಡ ನಿರೀಕ್ಷೆಯ ಭಾರ ನಮ್ಮ ಮೇಲಿದೆ. ಅನೇಕ ಬಾರಿ ಪತ್ರಕರ್ತರು ನಿರೀಕ್ಷೆ ಹೆಚ್ಚಿರುವುದು ಒತ್ತಡಕ್ಕೆ ಕಾರಣವಾಗಿಲ್ಲವೆ? ಎಂದು ಕೇಳಿದ್ದಾರೆ. ಜನರ ನಿರೀಕ್ಷೆಯನ್ನು ನಮ್ಮ ತಂಡದ ಆಟಗಾರರು ಒತ್ತಡವೆಂದು ಪರಿಗಣಿಸುವುದಿಲ್ಲ. ಅದು ಪ್ರೇರಕ ಶಕ್ತಿ. ಜನರು ನಮಗಾಗಿ ಕೂಗು ಹಾಕಿದಾಗಲೆಲ್ಲ ಉತ್ಸಾಹ ಇಮ್ಮಡಿಯಾಗುತ್ತದೆ. ಅಂಥ ಕ್ಷಣಗಳನ್ನು ನಾನಂತೂ ಆನಂದಿಸುತ್ತೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.