ADVERTISEMENT

ಫಿಸಿಯೊನತ್ತ ಪೊವೆಲ್ ಬೊಟ್ಟು

ಉದ್ದೀಪನ ಮದ್ದು ಸೇವನೆ ವಿವಾದ: ಅಥ್ಲೀಟ್‌ಗಳ ಕೊಠಡಿಗೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಲಂಡನ್ (ಎಎಫ್‌ಪಿ/ರಾಯಿಟರ್ಸ್‌): ಬೀಜಿಂಗ್ ಒಲಿಂಪಿಕ್ಸ್‌ನ ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದ ವಿಶ್ವದ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಜಮೈಕಾದ ಅಸಾಫಾ ಪೊವೆಲ್ ಹಾಗೂ ಶೇರೊನ್ ಸಿಪ್ಸನ್ ಉದ್ದೀಪನ ಮದ್ದು ಸೇವಿಸಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು, ಫಿಸಿಯೊ ಅವರತ್ತ ಬೊಟ್ಟು ಮಾಡಿದ್ದಾರೆ.

`ಆಹಾರ ನೀಡುವಲ್ಲಿ ವ್ಯತ್ಯಾಸವಾಗಿರುವುದೇ ನಮ್ಮ ಈ ಸ್ಥಿತಿಗೆ ಕಾರಣ' ಎಂದು ಡೇಲಿ ಟೆಲಿಗ್ರಾಫಿ ಪತ್ರಿಕೆಯ ನೀಡಿದ ಸಂದರ್ಶನದಲ್ಲಿ ಅವರು ಆರೋಪಿಸಿದ್ದಾರೆ. ಕೆನಡಾದ ಕ್ರಿಸ್ಟೋಫರ್ ಕ್ಸುರೆಬ್ ಅವರು ಪೊವೆಲ್ ಮತ್ತು ಸಿಪ್ಸನ್ ಫಿಸಿಯೊ ಆಗಿದ್ದರು.

ಹೋದ ತಿಂಗಳು ಜಮೈಕಾ ರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್‌ನಲ್ಲಿ ಮದ್ದು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪೊವೆಲ್, ಸಿಪ್ಸನ್ ಒಳಗೊಂಡಂತೆ ಇತರ ಐವರು ಅಥ್ಲೀಟ್‌ಗಳು ಪರೀಕ್ಷೆಗೆ ಒಳಗಾಗಿದ್ದರು. ಅದರ ಫಲಿತಾಂಶ ಬಂದಿದ್ದು ಇಬ್ಬರೂ ಅಥ್ಲೀಟ್‌ಗಳು ಮದ್ದು ಸೇವನೆ ಮಾಡಿರುವುದು `ಎ' ಪರೀಕ್ಷೆಯಲ್ಲಿ ಸಾಬೀತಾಗಿದೆ. ಆದರೆ, `ಬಿ' ಮಾದರಿಯ ವರದಿ ಬರಬೇಕಿದೆ. ಆದರೆ, ಇಬ್ಬರೂ ಅಥ್ಲೀಟ್‌ಗಳು ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಹಿನ್ನಡೆಯಾಗಿದೆ.

`ಈ ಮೊದಲು 150ರಿಂದ 250 ಸಲ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗಿದ್ದೆ. ಆದರೆ, ಯಾವತ್ತಿಗೂ ಮದ್ದು ಸೇವಿಸಿದ ಆರೋಪ ನನ್ನ ವಿರುದ್ಧ ಬಂದಿರಲಿಲ್ಲ. ಆದರೆ, ಹೊಸ ಫಿಸಿಯೊ ಬಂದ ಬಳಿಕ ಕೆಟ್ಟ ಹೆಸರು ಬಂದಿದೆ' ಎಂದು ಅಸಾಫಾ ಟೀಕಿಸಿದ್ದಾರೆ.

`ಈ ವರ್ಷದ ಮಾರ್ಚ್‌ನಲ್ಲಿ ಸ್ನಾಯುಸೆಳೆತದ ನೋವಿನಿಂದ ಬಳಲುತ್ತಿದ್ದೆ. ಅಗ ಫಿಸಿಯೊ ಕ್ಸುರೆಬ್ 17 ರೀತಿಯ ಸಾಮರ್ಥ್ಯ ವೃದ್ಧಿ ಆಹಾರವನ್ನು ನೀಡಿದ್ದರು. ಆದರೆ, ಈ ಆಹಾರ ಸೇವನೆಯ ಬಗ್ಗೆ ಕೋಚ್‌ಗೆ ಏನೂ ತಿಳಿಸಿರಲಿಲ್ಲ' ಎಂದು ಪೊವೆಲ್ ಬಹಿರಂಗಗೊಳಿಸಿದ್ದಾರೆ.

ರೋಮ್ ವರದಿ (ಎಪಿ): 2008ರ ಒಲಿಂಪಿಕ್ಸ್‌ನ 100ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ಜಮೈಕಾದ ಸಿಪ್ಸನ್ ಹಾಗೂ ಪೊವೆಲ್ ತಂಗಿದ್ದ ಹೋಟೆಲ್ ಕೊಠಡಿಯ ಮೇಲೆ ಇಟಲಿಯ ಪೊಲೀಸರು ದಾಳಿ ನಡೆಸಿದ್ದಾರೆ.

`ಪೊವೆಲ್ ಅವರ ಕೊಠಡಿಯಲ್ಲಿ ಹುಡುಕಾಟ ನಡೆಸಿದಾಗ, ಕೆಲ ಮಾತ್ರೆಗಳು ಲಭ್ಯವಾಗಿವೆ. ಇದನ್ನು ನೋಡಿ ನಮಗೆ ಅಚ್ಚರಿಯಾಯಿತು. ಆದರೆ, ಸದ್ಯಕ್ಕೆ ಅವರನ್ನು ಬಂಧಿಸಿಲ್ಲ. ವಶಪಡಿಸಿಕೊಳ್ಳಲಾಗಿರುವ ಮಾದಕ ದ್ರವ್ಯ ಹಾಗೂ ಮಾತ್ರೆಗಳನ್ನು ಪೊಲೀಸ್ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಇನ್ನಷ್ಟು ಮಾಹಿತಿ ಸಿಗಲಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಪೊವೆಲ್ `ನಾನೇನೂ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದೇನೆ. ಮತ್ತೆ ಈಗಲೂ ಅದನ್ನೇ ಹೇಳುತ್ತೇನೆ. ತನಿಖೆಯ ನಂತರ ಎಲ್ಲವೂ ಗೊತ್ತಾಗಲಿದೆ' ಎಂದು ಬರೆದಿದ್ದಾರೆ.

ಕಿಂಗ್‌ಸ್ಟನ್‌ನಲ್ಲಿ ಕಳೆದ ತಿಂಗಳು ನಡೆದ ಜಮೈಕಾ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಮದ್ದು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಐವರು ಅಥ್ಲೀಟ್‌ಗಳು ಪರೀಕ್ಷೆಯಲ್ಲಿ ಸಿಕ್ಕಿಬಿದಿದ್ದರು. ಅದರಲ್ಲಿ ಡಿಸ್ಕಸ್ ಎಸೆತ ಸ್ಪರ್ಧಿ ಅಲಿಸನ್ ರಾಂಡಲ್ ಕೂಡಾ ಒಬ್ಬರಾಗಿದ್ದಾರೆ ಎನ್ನುವ ಮಾಹಿತಿ ಈಗ ಬಹಿರಂಗವಾಗಿದೆ.

ರಾಂಡಲ್ ಕಳೆದ ವರ್ಷದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಮದ್ದು ಸೇವನೆ ವಿವಾದದಲ್ಲಿ ರಾಂಡಲ್ ಹೆಸರು ಕೇಳಿಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅವರು, ಈ ವಿಷಯ ಕೇಳಿ `ಆಘಾತ ಹಾಗೂ ಅಚ್ಚರಿಯಾಯಿತು' ಎಂದು ಹೇಳಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಜಮೈಕಾ ಅಥ್ಲೆಟಿಕ್ಸ್ ಸಂಸ್ಥೆಯ ಆಡಳಿತ `ಮದ್ದು ಸೇವನೆಯಲ್ಲಿ ಸಿಕ್ಕಿ ಬಿದ್ದ ಇನ್ನಿಬ್ಬ ಅಥ್ಲೀಟ್‌ಗಳು ಯಾರು ಎನ್ನುವುದರ ಬಗ್ಗೆ ನಮಗಿನ್ನೂ ಮಾಹಿತಿ ಲಭ್ಯವಾಗಿಲ್ಲ' ಎಂದಿದ್ದಾರೆ..

ಎಚ್ಚೆತ್ತ ಅಧಿಕಾರಿಗಳು: ಮಾಜಿ ವಿಶ್ವ ಚಾಂಪಿಯನ್ ಅಥ್ಲೀಟ್ ಅಮೆರಿಕದ ಟೈಸನ್ ಗೇ, ಪೊವೆಲ್ ಮತ್ತು ಸಿಪ್ಸನ್ ಮದ್ದು ಸೇವಿಸಿ ಸಿಕ್ಕಿ ಬಿದ್ದ ವಿಷಯ ಬಹಿರಂಗವಾದ ನಂತರ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್  ಅಧಿಕಾರಿಗಳು ಎಚ್ಚೆತ್ತುಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.