ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಕೃತಕ ಟರ್ಫ್ ಹಾಗೂ ಇಲ್ಲಿರುವ ಸೌಲಭ್ಯಗಳ ಬಗ್ಗೆ ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಮೆಚ್ಚುಗೆ ವ್ಯಕ್ತಪಡಿಸಿದೆ. ಅಷ್ಟ ಮಾತ್ರವಲ್ಲದೇ, ಭಾರತದಲ್ಲಿ ಪ್ರಾದೇಶಿಕ ಅಭಿವೃದ್ಧಿ ಕಚೇರಿ ಸ್ಥಾಪಿಸಲಾಗುವುದು ಎಂದು ಅದು ಪ್ರಕಟಿಸಿದೆ.
ತಾಂತ್ರಿಕ ಪರಿಣತ ಜೀನ್ ಮೈಕಲ್ ಬೆನೆಜೆಟ್ ಹಾಗೂ ಥಿಯರಿ ರಿಜೆನಾಸ್ (ಅಭಿವೃದ್ಧಿ ನಿರ್ದೇಶಕ) ಅವರನ್ನೊಳಗೊಂಡ ಫಿಫಾ ನಿಯೋಗ ಶನಿವಾರ ನೂತನ ಟರ್ಫ್ ಹಾಗೂ ಇಲ್ಲಿರುವ ಸೌಲಭ್ಯಗಳ ಪರಿಶೀಲನೆ ನಡೆಸಿತು.
`ಭಾರತದ ಫುಟ್‌ಬಾಲ್ ಎರಡು ವಿಭಾಗದಲ್ಲಿ ಕೊರತೆ ಎದುರಿಸುತ್ತಿದೆ. ಅದು ಮೂಲ ಸೌಲಭ್ಯಗಳ ಕೊರತೆ ಹಾಗೂ ತಳಮಟ್ಟದಿಂದ ಫುಟ್‌ಬಾಲ್ ಸುಧಾರಣೆ ಕಾಣದಿರುವುದು~ ಎಂದು ರಿಜೆನಾಸ್ ನುಡಿದರು.
ಶ್ರೀಲಂಕಾದಲ್ಲಿರುವ ಫಿಫಾ ಪ್ರಾದೇಶಿಕ ಅಭಿವೃದ್ಧಿ ಕಚೇರಿ ನವದೆಹಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಅದು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಲಿದೆ.
`ನಾನು ಇಲ್ಲಿಗೆ ನಾಲ್ಕು ವರ್ಷಗಳ ಹಿಂದೆ ಆಗಮಿಸಿದ್ದೆ. ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಅದ್ಭುತ ಬದಲಾವಣೆಗಳಾಗಿವೆ. ಇಲ್ಲಿ ಉತ್ತಮ ಸೌಲಭ್ಯಗಳಿವೆ. ಹಾಗೇ, ಹೊಸದಾಗಿ ಹಾಸಲಾಗಿರುವ ಟರ್ಫ್ ಕೂಡ ಚೆನ್ನಾಗಿದೆ. ಬೆಂಗಳೂರಿನಲ್ಲಿ ಫುಟ್‌ಬಾಲ್ ಅಭಿವೃದ್ಧಿಗೆ ಫಿಫಾ ಗೋಲ್ ಪ್ರೊಜೆಕ್ಟ್ ಪ್ರಮುಖ ಪಾತ್ರ ವಹಿಸಲಿದೆ~ ಎಂದು ಮೈಕಲ್ ಬೆನೆಜೆಟ್ ತಿಳಿಸಿದರು.
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹಾಗೂ ಕೆಎಸ್‌ಎಫ್‌ಎ ಅಧ್ಯಕ್ಷ ಎ.ಆರ್.ಖಲೀಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.