ADVERTISEMENT

ಫೈನಲ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

ಇಂಡೊನೇಷ್ಯಾ ಓಪನ್ ಸೂಪರ್ ಸೀರಿಸ್‌ ಬ್ಯಾಡ್ಮಿಂಟನ್‌; ಪ್ರಣಯ್ ಸವಾಲು ಅಂತ್ಯ

ಪಿಟಿಐ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶನಿವಾರ ಸನ್‌ ವಾನ್‌ ಹೊ ವಿರುದ್ಧ ಗೆದ್ದ ಭಾರತದ ಕೆ. ಶ್ರೀಕಾಂತ್‌ ಆಟದ ವೈಖರಿ   -ಎಎಫ್‌ಪಿ ಚಿತ್ರ
ಇಂಡೊನೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶನಿವಾರ ಸನ್‌ ವಾನ್‌ ಹೊ ವಿರುದ್ಧ ಗೆದ್ದ ಭಾರತದ ಕೆ. ಶ್ರೀಕಾಂತ್‌ ಆಟದ ವೈಖರಿ -ಎಎಫ್‌ಪಿ ಚಿತ್ರ   

ಜಕಾರ್ತ: ಭಾರತದ ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಇಂಡೊನೇಷ್ಯಾ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ಶನಿವಾರ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಎಚ್‌.ಎಸ್‌ಪ್ರಣಯ್‌ ಅವರ ಸವಾಲು ಅಂತ್ಯಗೊಂಡಿದೆ.

24 ವರ್ಷ ವಯಸ್ಸಿನ ಭಾರತದ ಆಟಗಾರ ಸೆಮಿಫೈನಲ್‌ನಲ್ಲಿ 21–15, 18–21, 24–22ರಲ್ಲಿ ವಿಶ್ವ ರ್‍ಯಾಂಕಿಂಗ್‌ ನಲ್ಲಿ ಮೊದಲ ಸ್ಥಾನದಲ್ಲಿರುವ ಕೊರಿಯಾದ ಸನ್ ವಾನ್ ಹೊಗೆ ಆಘಾತ ನೀಡಿದರು. ಒಂದು ಗಂಟೆ 12 ನಿಮಿಷ ನಡೆದ ಪಂದ್ಯದಲ್ಲಿ ಶೀಕಾಂತ್‌ ಅಮೋಘ ಸಾಮರ್ಥ್ಯದಿಂದ ಆಡಿದರು.

ಹಿಂದಿನ ನಾಲ್ಕು ಮುಖಾಮುಖಿ ಗಳಲ್ಲಿ ಶ್ರೀಕಾಂತ್ ಕೊರಿಯಾದ ಆಟಗಾರನ ಎದುರು ಸೋಲು ಕಂಡಿದ್ದರು. ಫೈನಲ್‌ನಲ್ಲಿ ಅವರು ಜಪಾನ್‌ನ ಕಜು ಮಸಾ ಸಕೈ ಅವರನ್ನು ಎದುರಿಸಲಿದ್ದಾರೆ. ಸೂಪರ್ ಸರಣಿ ಬ್ಯಾಡ್ಮಿಂಟನ್‌ನಲ್ಲಿ ಶ್ರೀಕಾಂತ್‌ ಅವರಿಗೆ ಇದು ನಾಲ್ಕನೇ ಫೈನಲ್ ಪಂದ್ಯ ಆಗಲಿದೆ.

ಟೂರ್ನಿಯ ಆರಂಭದಿಂದಲೂ ಉತ್ತಮ ಆಟದ ಮೂಲಕ ಭರವಸೆ ಮೂಡಿಸಿದ್ದ ಪ್ರಣಯ್‌ ಅವರ ಪ್ರಶಸ್ತಿಯ ಕನಸು ಭಗ್ನಗೊಂಡಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 25ನೇ ಸ್ಥಾನದಲ್ಲಿರುವ ಪ್ರಣಯ್‌ ಕಳೆದ ಎರಡು ದಿನಗಳಲ್ಲಿ ಅಗ್ರಮಾನ್ಯ ಆಟಗಾರರನ್ನು ಮಣಿಸಿ ಸೆಮಿಫೈನಲ್‌ ತಲುಪಿದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಲೀ ಚಾಂಗ್ ವೀ ಮತ್ತು ಚಿನ್ನ ಎತ್ತಿಹಿಡಿದಿದ್ದ ಚೆನ್ ಲಾಂಗ್ ಅವರಿಗೆ ಪ್ರಣಯ್ ಆಘಾತ ನೀಡಿದ್ದರು.

ಆದರೆ ನಾಲ್ಕರ ಘಟ್ಟದ ಪಂದ್ಯದಲ್ಲಿ ಪ್ರಣಯ್‌ 21–17, 26–28, 18–21 ರಲ್ಲಿ ಜಪಾನ್‌ನ ಕಜುಮಸಾ ಸಕೈ ಎದುರು ಸೋಲು ಕಂಡಿದ್ದಾರೆ.
2013ರಲ್ಲಿ ಪ್ರಣಯ್‌ ಇದೇ ಟೂರ್ನಿ ಯಲ್ಲಿ ಸಕೈ ಎದುರು ಸೋಲು ಕಂಡು ತಮ್ಮ ಸವಾಲು ಅಂತ್ಯಗೊಳಿಸಿದ್ದರು.

ಜಪಾನ್‌ನ ಆಟಗಾರನ ಶಕ್ತಿಯುತ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳನ್ನು ಎದುರಿ ಸಲು ಪ್ರಣಯ್‌ಗೆ ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನಲ್ಲಿ ಸಕೈ 2–2ರಲ್ಲಿ ಸಮಬಲ ಹೊಂದಿದ್ದರು. ಬಳಿಕ 4–2 ರಲ್ಲಿ ಪ್ರಣಯ್ ಮುನ್ನಡೆ ಸಾಧಿಸಿದರು. ನಂತರ ಈ ಅಂತರವನ್ನು 11–6ಕ್ಕೆ ಏರಿಸಿದರು. 19–15ರಲ್ಲಿ ಮುಂದಿದ್ದ ಪ್ರಣಯ್ ಸುಲಭದಲ್ಲಿ ಗೆದ್ದು ಭರವಸೆ ಮೂಡಿಸಿದರು.

ಎರಡನೇ ಗೇಮ್‌ನಲ್ಲಿ ಸಕೈ ಆರಂಭದಲ್ಲೇ 5–1ರಲ್ಲಿ ಮುನ್ನುಗ್ಗಿದರು. ಭಾರತದ ಆಟಗಾರ 4–5ರಲ್ಲಿ ಪೈಪೋಟಿ ನೀಡಿದರು. ಆದರೆ ಈ ವೇಳೆ ಸಕೈ ಅವರ  ಶಕ್ತಿಯುತ ಹೊಡೆತಗಳನ್ನು ಎದುರಿಸಲು ಪ್ರಣಯ್ ಸಾಕಷ್ಟು ಪ್ರಯಾಸಪಟ್ಟರು. ಸ್ಮ್ಯಾಷ್‌ಗಳಿಗೆ ಉತ್ತರ ನೀಡದೆ ಹಿಂದೆ ಉಳಿದರು. ಇದರ ಲಾಭ ಪಡೆದ ಜಪಾನ್‌ನ ಆಟಗಾರ 11–5ಕ್ಕೆ ಹೆಚ್ಚು ಅಂತರದ ಮುನ್ನಡೆ ಗಿಟ್ಟಿಸಿದರು. ದೀರ್ಘ ರ್‍ಯಾಲಿಗಳಲ್ಲಿ ಪ್ರಣಯ್ ಮತ್ತೆ ಹಿಂದೆ ಉಳಿದರು.

ಬಳಿಕ ಭಾರತದ ಆಟಗಾರ ಅಮೋಘ ರೀತಿಯಲ್ಲಿ ಪಾಯಿಂಟ್ಸ್ ಗಳಿಸುತ್ತಾ ಹೋದರು. 5 ರಿಂದ 15ರವರೆಗೆ ನಿರಂತರವಾಗಿ ಪಾಯಿಂಟ್ಸ್ ಕಲೆಹಾಕಿದರು. 15–17 ಹಾಗೂ 18–18 ರಲ್ಲಿ ಚುರುಕಿನ ಆಟದಿಂದ ಸಮ ಬಲದ ಪೈಪೋಟಿ ನಡೆಸಿದರು. ಬಳಿಕ 20–19, 26–27ರ ವರೆಗೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತು. ಈ ವೇಳೆ ಪ್ರಣಯ್‌ ಎರಡು ಸ್ಮ್ಯಾಷ್‌ಗಳಿಗೆ ನಿರುತ್ತರರಾದರು. ಇದರಿಂದಾಗಿ ಸೋಲು ಕಂಡರು.

ನಿರ್ಣಾಯಕ ಗೇಮ್‌ನಲ್ಲಿ ಕೂಡ ಸಕೈ 6–4ರ ಮುನ್ನಡೆ ಗಿಟ್ಟಿಸಿದರು. ಪ್ರಣಯ್‌ 7–9ರಲ್ಲಿ ಮುನ್ನಡೆ ಕುಗ್ಗಿಸಿದರು.ಆದರೆ ಮತ್ತೆ 11–9ರಲ್ಲಿ ಜಪಾನ್‌ನ ಆಟಗಾರ ಪೈಪೋಟಿ ನೀಡಿದರು. 17–18ರಲ್ಲಿ ಗೇಮ್‌ನ ಸಮೀಪದಲ್ಲಿ ಇದ್ದ ಪ್ರಣಯ್ ಅನಗತ್ಯ ತಪ್ಪುಗಳನ್ನು ಎಸಗಿದರು. ಎದುರಾಳಿಯ ಚುರುಕಿನ ಆಟದ ಮುಂದೆ ತಬ್ಬಿಬ್ಬಾದರು. ಗೇಮ್‌ ಸೋತ ಅವರು ಫೈನಲ್ ತಲುಪುವ ಅವಕಾಶ ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT