ನ್ಯೂಯಾರ್ಕ್ (ಎಎಫ್‌ಪಿ): ಇಟಲಿಯ ಫ್ಲೇವಿಯಾ ಪೆನೆಟಾ ಮತ್ತು ಪೋಲೆಂಡ್‌ನ ಅಗ್ನೀಸ್ಕಾ ರಡ್ವಾನ್‌ಸ್ಕಾ ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪಾರಿಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪೆನೆಟಾ 6-2, 6-2 ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಚೀನಾದ ಲೀ ನಾ ಅವರಿಗೆ ಆಘಾತ ನೀಡಿದರು. ವಿಶ್ವ ರ್‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿರುವ ಪೆನೆಟಾ ಇಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು. ಇಟಲಿಯ ಆಟಗಾರ್ತಿ ಪ್ರಶಸ್ತಿಗಾಗಿ ರಡ್ವಾನ್‌ಸ್ಕಾ ಜೊತೆ ಪೈಪೋಟಿ ನಡೆಸಲಿದ್ದಾರೆ. ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ರಡ್ವಾನ್‌ಸ್ಕಾ 6-3, 6-4 ರಲ್ಲಿ ರೊಮೇನಿಯದ ಸಿಮೊನಾ ಹಲೆಪ್ ವಿರುದ್ಧ ಜಯ ಸಾಧಿಸಿದರು.
ಸೆಮಿಗೆ ಜೊಕೊವಿಚ್: ಸರ್ಬಿಯದ ನೊವಾಕ್ ಜೊಕೊವಿಚ್ ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 6-1, 6-3 ರಲ್ಲಿ ಫ್ರಾನ್ಸ್‌ನ ಜೂಲಿಯನ್ ಬೆನೆಟು ವಿರುದ್ಧ ಗೆದ್ದರು.
ಎರಡನೇ ಶ್ರೇಯಾಂಕ ಹೊಂದಿರುವ ಜೊಕೊವಿಚ್ ಸೆಮಿಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೆರ್ ವಿರುದ್ಧ ಪೈಪೋಟಿ ನಡೆಸುವರು. ದಿನದ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಇಸ್ನೆರ್ 7-6, 7-6 ರಲ್ಲಿ ಅರ್ನೆಸ್ಟ್ ಗಲ್ಬಿಸ್ ಅವರನ್ನು ಸೋಲಿಸಿದರು. ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಚೈನೀಸ್ ತೈಪೆಯ ಸು-ವೀ ಸೀ ಮತ್ತು ಚೀನಾದ ಶುಯಿ ಪೆಂಗ್ ಅವರನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.