ADVERTISEMENT

ಫೈನಲ್ ಕನಸಲ್ಲಿ ಕೆಎಸ್‌ಸಿಎ ಇಲೆವೆನ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಬೆಂಗಳೂರು: ಶಫಿ ದಾರಾಷ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಭಾನುವಾರ ಆರಂಭವಾಗಲಿದ್ದು, ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಕೆಎಸ್‌ಸಿಎ ಇಲೆವೆನ್ ತಂಡ ಫೈನಲ್ ಪ್ರವೇಶಿಸುವ ಗುರಿ ಹೊಂದಿದೆ.

ಆಲೂರು ಎರಡನೇ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕು ದಿನದ ಪಂದ್ಯದಲ್ಲಿ ಸಿ.ಎಂ. ಗೌತಮ್ ನೇತೃತ್ವದ ಕೆಎಸ್‌ಸಿಎ ಇಲೆವೆನ್ ತಂಡ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ಎದುರು ಸೆಣಸಲಿದೆ. ಅನುಭವಿ ಆಟಗಾರರನ್ನು ಹೊಂದಿರುವ ಗೌತಮ್ ಬಳಗ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ರಾಜಸ್ತಾನ ಎದುರಿನ ಪಂದ್ಯದಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯ ಹೊರತು ಪಡಿಸಿದರೆ, ಉಳಿದ ಪಂದ್ಯಗಳಲ್ಲಿ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದರು.

ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ನಾಯಕ ಗೌತಮ್ ಸೇರಿದಂತೆ ಪ್ರಬಲ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಇಲೆವೆನ್ ತಂಡ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ. ಈ ತಂಡದ ಸ್ಪಿನ್ ವಿಭಾಗ ಬಲಗೊಂಡಿರುವುದು ಸಕಾರಾತ್ಮಕ ಅಂಶ. ಕೆ.ಪಿ. ಅಪ್ಪಣ್ಣ ಹೋದ ರಣಜಿ ಋತುವಿನಲ್ಲಿ ಸಮರ್ಥ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.

ಆದರೆ, ಈ ಲೆಗ್ ಸ್ಪಿನ್ನರ್ ಶಫಿ ದಾರಾಷ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿ ಬೌಲಿಂಗ್ ಮಾಡುತ್ತಿದ್ದಾರೆ. ರಾಜಸ್ತಾನ ಎದುರಿನ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಸೇರಿ ಎಂಟು ವಿಕೆಟ್ ಕಬಳಿಸಿದ್ದರು. ಅದರ ಹಿಂದಿನ ಪಂದ್ಯದಲ್ಲಿ (ಗೋವಾ ಎದುರು) ಹತ್ತು ವಿಕೆಟ್ ಉರುಳಿಸಿದ್ದರು. ಇದು ತಂಡದ ಬೌಲಿಂಗ್ ವಿಭಾಗದ ಸಾಮರ್ಥ್ಯ ಹೆಚ್ಚಿಸಿದೆ. ಯುವ ಆಟಗಾರ ಕರುಣ್ ನಾಯರ್ ಸಾರಥ್ಯದ ಕಾರ್ಯದರ್ಶಿ ಇಲೆವೆನ್ ಸಹ ಉತ್ತಮ ಆಟಗಾರರನ್ನು ಒಳಗೊಂಡಿದೆ. ಈ ತಂಡವೂ ಪ್ರಶಸ್ತಿ ಘಟ್ಟ ತಲುಪುವ ವಿಶ್ವಾಸ ಹೊಂದಿದೆ.

ಆಲೂರು ಮೂರನೇ ಕ್ರೀಡಾಂಗಣದಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡ ಹರಿಯಾಣದ ಎದುರು ಆಡಲಿದೆ.

ಭರವಸೆಯ ಕಪೂರ್: ಅಧ್ಯಕ್ಷರ ತಂಡದ ನಾಯಕ ಕುನಾಲ್ ಕಪೂರ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿ. ಕಳೆದ ರಣಜಿಯಲ್ಲಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದರು. ಹಿಂದಿನ ಲೀಗ್ ಪಂದ್ಯದಲ್ಲಿ ತ್ರಿಪುರ ಎದುರು ಶತಕ ಸಿಡಿಸಿದ್ದರು. ಈ ತಂಡದ ಇನ್ನೊಬ್ಬ ಬ್ಯಾಟ್ಸ್‌ಮನ್ ಆರ್. ಸಮರ್ಥ್ ತ್ರಿಪುರ ಎದುರು ಶತಕ ಗಳಿಸಿದ್ದಾರೆ. ಇವರನ್ನು ಕಟ್ಟಿ ಹಾಕುವ ಸವಾಲು ಹರಿಯಾಣದ ಬೌಲರ್‌ಗಳ ಮುಂದಿದೆ.

ಒಟ್ಟು 16 ತಂಡಗಳು ಪಾಲ್ಗೊಂಡಿರುವ ಈ ಟೂರ್ನಿಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ ಒಂದು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಹರಿಯಾಣ 11 ಪಾಯಿಂಟ್‌ಗಳಿಂದ `ಡಿ' ಗುಂಪಿನಲ್ಲಿ ಮೊದಲ ಸ್ಥಾನ ಪಡೆದರೆ, ಅಧ್ಯಕ್ಷರ ಇಲೆವೆನ್ `ಬಿ' ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದೆ. ಫೈನಲ್ ಹಣಾಹಣಿ ಆಗಸ್ಟ್ 10ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.