ADVERTISEMENT

ಫೋರ್ಸ್ ಇಂಡಿಯಾ ಉತ್ತಮ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಮನಾಮ, ಬಹರೇನ್ (ಐಎಎನ್‌ಎಸ್): ಸಹಾರಾ ಫೋರ್ಸ್ ಇಂಡಿಯಾ ತಂಡದ ಚಾಲಕರು ಬಹರೇನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನ ಅಭ್ಯಾಸದ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮನಾಮದಲ್ಲಿರುವ ಸಕೀರ್ ಸರ್ಕಿಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಮೊದಲ ಅವಧಿಯ ಅಭ್ಯಾಸದಲ್ಲಿ ಫೋರ್ಸ್ ಇಂಡಿಯಾ ಚಾಲಕರಾದ ಪೌಲ್ ಡಿ ರೆಸ್ಟಾ ಮತ್ತು ನಿಕೊ ಹಕೆನ್‌ಬರ್ಗ್ ಕ್ರಮವಾಗಿ ಮೂರು ಹಾಗೂ ಆರನೇ ಸ್ಥಾನ ಪಡೆದರು. ಆದರೆ ಸುರಕ್ಷತೆಯ ಕಾರಣದಿಂದ ತಂಡ ಮಧ್ಯಾಹ್ನ ನಡೆದ ಎರಡನೇ ಅವಧಿಯ ಅಭ್ಯಾಸದಲ್ಲಿ ಪಾಲ್ಗೊಳ್ಳಲಿಲ್ಲ.

ಇಬ್ಬರು ಚಾಲಕರೂ 26 ಲ್ಯಾಪ್‌ಗಳನ್ನು ಪೂರ್ಣಗೊಳಿಸಿದರು. ಡಿ ರೆಸ್ಟಾ 1:34.150 ಸೆಕೆಂಡ್‌ಗಳೊಂದಿಗೆ ಮೂರನೇ ಹಾಗೂ ಹಕೆನ್‌ಬರ್ಗ್ 1:34.344 ಸೆಕೆಂಡ್‌ಗಳೊಂದಿಗೆ ಆರನೇ ಸ್ಥಾನ ಪಡೆದರು. ಮೆಕ್‌ಲಾರೆನ್ ತಂಡದ ಲೂಯಿಸ್ ಹ್ಯಾಮಿಲ್ಟನ್ (1:33.572 ಸೆ.) ಅತಿ ವೇಗದ ಸಮಯ ಕಂಡುಕೊಂಡು ಅಗ್ರಸ್ಥಾನದಲ್ಲಿ ನಿಂತರು.

ಬಹರೇನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಈಗಲೂ ಸಂಪೂರ್ಣವಾಗಿ ನಿಂತಿಲ್ಲ. ಗುರುವಾರ ಫೋರ್ಸ್ ಇಂಡಿಯಾ ತಂಡದ ಸಿಬ್ಬಂದಿಯಿದ್ದ ಕಾರಿನ ಸಮೀಪದಲ್ಲೇ ಫೈರ್ ಬಾಂಬ್ ಸಿಡಿದಿತ್ತು. ಸಕೀರ್ ಸರ್ಕಿಟ್‌ನಿಂದ ಹೋಟೆಲ್‌ಗೆ ತೆರಳುವ ವೇಳೆ ನಡೆದ ಈ ಘಟನೆಯಲ್ಲಿ ಯಾರೂ ಗಾಯಗೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.