ADVERTISEMENT

ಬಲಿಷ್ಠರಿಗೆ ಶಾಕ್ ನೀಡುವ ತಾಕತ್ತು ಇದೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 19:00 IST
Last Updated 28 ಮಾರ್ಚ್ 2011, 19:00 IST
ಬಲಿಷ್ಠರಿಗೆ ಶಾಕ್ ನೀಡುವ ತಾಕತ್ತು ಇದೆ
ಬಲಿಷ್ಠರಿಗೆ ಶಾಕ್ ನೀಡುವ ತಾಕತ್ತು ಇದೆ   

ಮಂಗಳವಾರ ನಡೆಯುವ ಸೆಮಿಫೈನಲ್ ಪಂದ್ಯ ಶ್ರೀಲಂಕಾ ತಂಡಕ್ಕೆ ‘ಸುಲಭದ ಹಾದಿ’ ಎಂದು ಹೆಚ್ಚಿನವರು ಹೇಳುತ್ತಿದ್ದಾರೆ. ನ್ಯೂಜಿಲೆಂಡ್ ‘ಅಂಡರ್‌ಡಾಗ್’ ಎಂಬ ಹಣೆಪಟ್ಟಿಯೊಂದಿಗೆ ಈ ಪಂದ್ಯ ಆಡಲಿದೆ. ಇಂತಹ ಹಣೆಪಟ್ಟಿಯನ್ನು ಕಿವೀಸ್ ಆಟಗಾರರು ಆನಂದಿಸುವರು. ಏಕೆಂದರೆ ‘ಫೇವರಿಟ್’ ಎಂಬ ಹಣೆಪಟ್ಟಿ ಇಲ್ಲದ ಕಾರಣ ಈ ತಂಡದವರಿಗೆ ಒತ್ತಡವಿಲ್ಲದೆ ಆಡಬಹುದು. ಪ್ರತಿ ಪಂದ್ಯ ಕಳೆದಂತೆ ನ್ಯೂಜಿಲೆಂಡ್ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. ಬಲಿಷ್ಠರಿಗೆ ‘ಶಾಕ್’ ನೀಡುವ ತಾಕತ್ತು ಈ ತಂಡಕ್ಕಿದೆ. ಪ್ರಸಕ್ತ ಟೂರ್ನಿಯಲ್ಲಿ ಫೀಲ್ಡಿಂಗ್‌ನಲ್ಲಿ ಮಿಂಚಿದ್ದು ಕಿವೀಸ್ ಮಾತ್ರ. ಕೊನೆಯವರೆಗೂ ಹೋರಾಡುವ ಛಲ ತಂಡದ ಆಟಗಾರರಲ್ಲಿದೆ. ಅವರು ಅಂಗಳದಲ್ಲಿ ಹೆಚ್ಚಿನ ತಪ್ಪುಗಳನ್ನು ಮಾಡುವುದಿಲ್ಲ. ಅದೇ ರೀತಿ ಎದುರಾಳಿಗಳಿಗೆ ಯಾವುದನ್ನೂ ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ.

ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಶಕ್ತಿಯ ಬಗ್ಗೆಯೂ ಅನುಮಾನ ಬೇಡ. ತಾಂತ್ರಿಕವಾಗಿ ಪಳಗಿರುವ ಮಾರ್ಟಿನ್ ಗುಪ್ಟಿಲ್ ಹಾಗೂ ಆಕ್ರಮಣಕಾರಿ ಆಟಕ್ಕೆ ಹೆಸರು ಪಡೆದಿರುವ ಬ್ರೆಂಡನ್ ಮೆಕ್ಲಮ್ ಇನಿಂಗ್ಸ್ ಆರಂಭಿಸುವರು. ಬಳಿಕ ಜೆಸ್ಸಿ ರೈಡರ್ ಹಾಗೂ ರಾಸ್ ಟೇಲರ್ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸುವರು. ಯಾವ ಪರಿಸ್ಥಿತಿಯಲ್ಲಿ ಹೇಗೆ ಚೆಂಡೆಸೆಯಬೇಕು ಎಂಬುದನ್ನು ತಿಳಿದಿರುವ ಬೌಲರ್‌ಗಳಾದ ಜೇಕಬ್ ಓರಮ್ ಮತ್ತು ಟಿಮ್ ಸೌಥಿ ಈ ತಂಡದಲ್ಲಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಡೇನಿಯಲ್ ವೆಟೋರಿ ಅವರ ಸಮರ್ಥ ನಾಯಕತ್ವ ತಂಡಕ್ಕಿದೆ. ಮಾತ್ರವಲ್ಲ ಅವರು ಶ್ರೇಷ್ಠ ಬೌಲರ್ ಕೂಡಾ ಹೌದು. ಮತ್ತೊಂದೆಡೆ ಶ್ರೀಲಂಕಾ ಈ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಅತ್ಯಂತ ‘ಸಮತೋಲಿತ’ ತಂಡ. ಲಂಕಾ ವಿರುದ್ಧ ಗೆಲುವು ಪಡೆಯಬೇಕಾದರೆ, ಲಸಿತ್ ಮಾಲಿಂಗ ಹಾಗೂ ಮುತ್ತಯ್ಯ ಮುರಳೀಧರನ್ ವಿರುದ್ಧ ಉತ್ತಮ ಆಟವಾಡುವುದು ಅಗತ್ಯ. ಏಕೆಂದರೆ ಇವರನ್ನು ಸಮರ್ಥವಾಗಿ ಎದುರಿಸದಿದ್ದರೆ, ದೊಡ್ಡ ಮೊತ್ತ ಕಲೆಹಾಕುವುದು ಕಷ್ಟ.

ಮಾಲಿಂಗ ‘ವಿಕೆಟ್ ಟು ವಿಕೆಟ್’ ಬೌಲ್ ಮಾಡುವರು. ಇದರಿಂದ ಅವರ ವಿರುದ್ಧ ದೊಡ್ಡ ಹೊಡೆತಗಳಿಗೆ ಮುಂದಾಗಲು ಹೆಚ್ಚಿನ ಅವಕಾಶ ಸಿಗುವುದಿಲ್ಲ. ಮುರಳಿ ಅವರ ಆಫ್ ಸ್ಪಿನ್ ಹಾಗೂ ದೂಸ್ರಾ ಎಸೆತಗಳನ್ನು ಅಂದಾಜಿಸುವುದು ಕಷ್ಟ. ಅಗತ್ಯದ ಸಂದರ್ಭಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಇವರಿಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.