ADVERTISEMENT

ಬಾಕ್ಸಿಂಗ್: ಸೆಮಿಫೈನಲ್‌ಗೆ ದೇವೆಂದ್ರೊ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಪಂಚ್ ಮಾಡಲು ಮುಂದಾದ ಮೇರಿ ಕೋಮ್‌
ಪಂಚ್ ಮಾಡಲು ಮುಂದಾದ ಮೇರಿ ಕೋಮ್‌   

ನವದೆಹಲಿ:  ಭಾರತದ ಎಲ್. ದೇವೆಂದ್ರೊ ಸಿಂಗ್ ಮಂಗೋಲಿಯಾದ ಉಲನ್‌ ಬತಾರ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ನಾಲ್ಕನೇ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

52 ಕೆಜಿ ವಿಭಾಗದಲ್ಲಿ ದೇವೆಂದ್ರೊ ಕ್ವಾರ್ಟರ್‌ ಫೈನಲ್‌ನಲ್ಲಿ  ರಷ್ಯಾದ ದಿಮಿ ಯುಸುಪೊವ್ ಎದುರು ಗೆದ್ದರು.

ಮಣಿಪುರದ 23 ವರ್ಷದ ದೇವೆಂದ್ರೊ ಜನವರಿಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಅದರ ನಂತರ ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿ ಮತ್ತು ಥಾಯ್ಲೆಂಡ್‌ನಲ್ಲಿ ನಡೆದಿದ್ದ ಕಿಂಗ್ಸ್‌ ಕಪ್ ಟೂರ್ನಿಗಳಲ್ಲಿಯೂ ಸೋತಿದ್ದರು. ಆದರೆ, ಇಲ್ಲಿ ಸೆಮಿಫೈನಲ್ ತಲುಪುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದಾರೆ. ತಮ್ಮ ಎದುರಾಳಿಯ ಮೇಲೆ ಮಿಂಚಿನ ವೇಗದಲ್ಲಿ ಮುಷ್ಟಿಪ್ರಹಾರ ಮಾಡಿದ ಅವರು ಗೆಲುವು ಸಾಧಿಸಿದರು.  ಇನ್ನುಳಿದ ಪಂದ್ಯಗಳಲ್ಲಿ; ಭಾರತದ ರೋಹಿತ್ ತೊಕಾಸ್ ಅವರು 64 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಚಿನ್‌ಜೊರಿಗ್ ಬಾತರ್‌ಸುಕ್ ವಿರುದ್ಧ ಸೋಲನುಭವಿಸಿದರು.

ADVERTISEMENT

ಇಂದು ಕ್ವಾರ್ಟರ್‌ಫೈನಲ್: ಶುಕ್ರವಾರ ನಡೆಯಲಿರುವ 51 ಕೆ.ಜಿ. ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಎಂ.ಸಿ. ಮೇರಿ ಕೋಮ್ ಕಣಕ್ಕಿಳಿಯಲಿದ್ದಾರೆ.

ರಷ್ಯಾದ ಅನ್ನಾ ಏಡ್ಮಾ ಮತ್ತು ಕೊರಿಯಾದ ಚೋಲ್ ಮಿ ಬಾಂಗ್ ಅವರ ನಡುವೆ ನಡೆಯಲಿರುವ ಪ್ರೀ ಕ್ವಾರ್ಟರ್‌ನಲ್ಲಿ ಜಯಿಸಿದವರು ಮೇರಿ ಕೋಮ್ ಅವರಿಗೆ ಸವಾಲೊಡ್ಡಲಿದ್ದಾರೆ.

ಪ್ರೀಕ್ವಾರ್ಟರ್‌ನಲ್ಲಿ ಬೈ ಪಡೆದಿದ್ದ ಮೇರಿ  ಎಂಟರ ಘಟ್ಟ ತಲುಪಿದ್ದರು.

ವನಿತೆಯರ ವಿಭಾಗದಲ್ಲಿ; ಪ್ರಿಯಾಂಕಾ ಚೌಧರಿ (60ಕೆಜಿ)  ರಷ್ಯಾದ ಅಲೆಕ್ಸಾಂಡ್ರಾ ಆರ್ದಿನಾ ವಿರುದ್ಧ; ಕಲಾವಂತಿ (75ಕೆಜಿ)  ರಷ್ಯಾದ ಲೂಬೊವ್ ಲುಸುಪೊವಾ ವಿರುದ್ಧ ಕಣಕ್ಕಿಳಿಯುವರು.

49 ಕೆ.ಜಿ. ಪುರುಷರ ವಿಭಾಗದಲ್ಲಿ ಭಾರತದ ಕೆ. ಶ್ಯಾಮಕುಮಾರ್ ಮತ್ತು ಮಂಗೋಲಿಯಾದ ಯಂಕ್ಮಂದಕ್ ಕಾರ್ಕೂ ಅವರನ್ನು ಎದುರಿಸುವರು. 64 ಕೆಜಿ ವಿಭಾಗದಲ್ಲಿ ಅಂಕುಶ್ ದಹಿಯಾ ಅವರು ಮಂಗೋಲಿಯಾದ ದುಲ್ಗುನ್ ವಿರುದ್ಧ; 69 ಕೆ.ಜಿ. ವಿಭಾಗದಲ್ಲಿ ದುರ್ಯೋಧನ್ ಸಿಂಗ್ ಆತಿಥೇಯ ದೇಶದ ಬೈಯಂಬಾ ಎರ್ಡೆನ್ ಆಟ್ಗೊನ ಬತಾರ್ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.