ADVERTISEMENT

ಬಿಎಫ್‌ಸಿಗೆ ಕೇರಳ ಬ್ಲಾಸ್ಟರ್ಸ್‌ ಸವಾಲು

ತವರಿನಲ್ಲಿ ಸುನಿಲ್‌ ಚೆಟ್ರಿ ಬಳಗಕ್ಕೆ ಲೀಗ್‌ ಹಂತದ ಕೊನೆಯ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 21:16 IST
Last Updated 28 ಫೆಬ್ರುವರಿ 2018, 21:16 IST
ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದ ಮುನ್ನಾ ದಿನವಾದ ಬುಧವಾರ ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ದೈಹಿಕ ಕಸರತ್ತು ನಡೆಸಿದರು. ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದ ಮುನ್ನಾ ದಿನವಾದ ಬುಧವಾರ ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ದೈಹಿಕ ಕಸರತ್ತು ನಡೆಸಿದರು. ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಅಮೋಘ ಜಯದ ಓಟ ಮುಂದುವರಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದವರು ಲೀಗ್ ಹಂತದ ಅಂತಿಮ ಪಂದ್ಯಕ್ಕೆ ಸಜ್ಜಾಗಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರು ಕೇರಳ ಬ್ಲಾಸ್ಟರ್ಸ್‌ ಎದುರು ಸೆಣಸಲಿದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬ್ಲಾಸ್ಟರ್ಸ್‌ಗೆ ಪ್ಲೇ ಆಫ್ ‍ಹಂತ ಪ್ರವೇಶಿಸಲು ಇದು ಕೊನೆಯ ಅವಕಾಶ. ಆದರೆ ಬಲಿಷ್ಠ ಬಿಎಫ್‌ಸಿಯನ್ನು ಮಣಿಸುವುದು ಸುಲಭದ ಮಾತು ಅಲ್ಲದ ಕಾರಣ ತಂಡ ಕಠಿಣ ಪರೀಕ್ಷೆಗೆ ಒಳಗಾಗಲಿದೆ.

ಈ ಪಂದ್ಯದಲ್ಲಿ ಗೆದ್ದರೂ ಬ್ಲಾಸ್ಟರ್ಸ್‌ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವುದು ಖಚಿತವಿಲ್ಲ. ಜೆಮ್‌ ಷೆಡ್‌ಪುರ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಕೂಡ ಸೆಮಿಫೈನಲ್ ಪ್ರವೇಶಕ್ಕಾಗಿ ಕಾಯುತ್ತಿವೆ.

ADVERTISEMENT

ಒಟ್ಟು 17 ಪಂದ್ಯಗಳಿಂದ 25 ಪಾಯಿಂಟ್‌ ಗಳಿಸಿರುವ ಬ್ಲಾಸ್ಟರ್ಸ್‌ ತಂಡ ಜೆಮ್‌ಷೆಡ್‌ಪುರ (26 ಪಾಯಿಂಟ್‌) ತಂಡದ ಹಿಂದೆ ಇದೆ. ಎಫ್‌ಸಿ ಗೋವಾ 24 ಪಾಯಿಂಟ್‌ಗಳೊಂದಿಗೆ ಸ್ಪರ್ಧಾ ಕಣದಲ್ಲಿದೆ. ಗುರುವಾರ ಬ್ಲಾಸ್ಟರ್ಸ್‌ ಗೆದ್ದು, ಮುಂದಿನ ಪಂದ್ಯಗಳಲ್ಲಿ ಜೆಮ್‌ಷೆಡ್‌ಪುರ ಮತ್ತು ಗೋವಾ ತಂಡಗಳು ಸೋತರೆ ಬ್ಲಾಸ್ಟರ್ಸ್‌ ಆಸೆ ಗರಿಗೆದರಲಿದೆ.

ಈಗಾಗಲೇ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸಿರುವ ಬಿಎಫ್‌ಸಿಗೆ ಗುರುವಾರದ ಪಂದ್ಯ ನಾಕೌಟ್ ಹಂತದ ಸ್ಪರ್ಧೆಗೆ ಅಭ್ಯಾಸದಂತೆ ಆಗಲಿದೆ.

ಕೇರಳ ಬ್ಲಾಸ್ಟರ್ಸ್ ಕೊನೆಯ ಐದು ಪಂದ್ಯಗಳಲ್ಲಿ ಅಜೇಯವಾಗಿದೆ. ಮೂರು ಪಂದ್ಯಗಳನ್ನು ಗೆದ್ದರೆ ಎರಡರಲ್ಲಿ ಡ್ರಾ ಸಾಧಿಸಿದೆ.

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿಯನ್ನು ಎದುರಿಸಿ ಈ ಅಜೇಯ ಓಟ ಮುಂದುವರಿಸಬೇಕಾದರೆ ತಂಡದ ಅತ್ಯಪೂರ್ವ ಆಟ ಆಡಬೇಕಾಗಿದೆ.

‘ತಂಡ ಈಗ ಕಠಿಣ ಪರಿಸ್ಥಿತಿಯಲ್ಲಿದೆ. ಆದರೂ ಗೆಲುವಿಗಾಗಿ ಎಲ್ಲ ರೀತಿಯ ಪ್ರಯತ್ನ ನಡೆಸಲಿದ್ದೇವೆ‘ ಎಂದು ಬ್ಲಾಸ್ಟರ್ಸ್‌ನ ಕೋಚ್ ಡೇವಿಡ್ ಜೇಮ್ಸ್ ಹೇಳಿದರು.

‘ಇದು ತಂಡದ ಕೊನೆಯ ಲೀಗ್ ಪಂದ್ಯ. ಪ್ಲೇ ಆಫ್‌ನಲ್ಲಿ ಹೆಚ್ಚು ಭರವಸೆಯಿಂದ ಆಡಲು ಈ ಪಂದ್ಯದ ಗೆಲುವು ಸಹಕಾರಿ ಆಗಲಿದೆ’ ಎಂದು ಬಿಎಫ್‌ಸಿ ಕೋಚ್‌ ಆಲ್ಬರ್ಟ್ ರೋಕಾ ಹೇಳಿದರು.

ಪಂದ್ಯ ಆರಂಭ: ರಾತ್ರಿ 8.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.