ADVERTISEMENT

ಬಿಎಫ್‌ಸಿಗೆ ವೀರೋಚಿತ ಸೋಲು

ಎಎಫ್‌ಸಿ ಕಪ್‌: ಇರಾಕ್‌ನ ಏರ್‌ಫೋರ್ಸ್‌ ತಂಡಕ್ಕೆ ಕಿರೀಟ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2016, 19:54 IST
Last Updated 5 ನವೆಂಬರ್ 2016, 19:54 IST
ದೋಹಾದಲ್ಲಿ ಶನಿವಾರ ನಡೆದ ಏಷ್ಯಾದ ಪ್ರತಿಷ್ಠಿತ ಎಎಫ್‌ಸಿ ಕಪ್  ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಸುನಿಲ್ ಚೆಟ್ರಿ (ಬಲ) ಮತ್ತು ಇರಾಕ್‌ ಏರ್‌ಫೋರ್ಸ್ ಕ್ಲಬ್‌ ತಂಡದ ಸಮೆಹ್ ಸಯೀದ್ ಮೆಜ್ಬಲ್ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು.                        -–ಎಎಫ್‌ಪಿ ಚಿತ್ರ
ದೋಹಾದಲ್ಲಿ ಶನಿವಾರ ನಡೆದ ಏಷ್ಯಾದ ಪ್ರತಿಷ್ಠಿತ ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಸುನಿಲ್ ಚೆಟ್ರಿ (ಬಲ) ಮತ್ತು ಇರಾಕ್‌ ಏರ್‌ಫೋರ್ಸ್ ಕ್ಲಬ್‌ ತಂಡದ ಸಮೆಹ್ ಸಯೀದ್ ಮೆಜ್ಬಲ್ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು. -–ಎಎಫ್‌ಪಿ ಚಿತ್ರ   
ದೋಹಾ,ಕತಾರ್‌: ಎಎಫ್‌ಸಿ ಕಪ್‌ ಗೆಲ್ಲುವ ಚಾರಿತ್ರಿಕ ಅವಕಾಶ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ ಕೈತಪ್ಪಿತು. ಇರಾಕ್‌ನ  ಏರ್‌ಫೋರ್ಸ್‌ ಕ್ಲಬ್‌ ತಂಡ (ಅಲ್‌ ಕ್ಯುವಾ ಅಲ್‌ ಜವಿಯಾ)ದ ಎದುರು ಬಿಎಫ್‌ಸಿ 0–1 ಗೋಲಿನಿಂದ ವೀರೋಚಿತ ಸೋಲು ಕಂಡಿತು.
 
ಸುಹೇಮ್‌ ಬಿನ್‌ ಹಮಾದ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಕ್ಷಣಗಳವರೆಗೂ ಬಿಎಫ್‌ಸಿ ಶಕ್ತಿಮೀರಿ ಹೋರಾಟ ನಡೆಸಿತು.
 
71ನೇ ನಿಮಿಷದಲ್ಲಿ ಹಮಾದಿ ಅಹಮ್ಮದ್‌ ಅಬ್ದುಲ್ಲಾ ಅವರು ಇರಾಕ್‌ ಕ್ಲಬ್‌ ಪರ ಗೋಲು ತಂದಿತ್ತು ಬಿಎಫ್‌ಸಿ ಕನಸನ್ನು ಛಿದ್ರಗೊಳಿಸಿದರು. ಬಿಎಫ್‌ಸಿ ಗೋಲು ಆವರಣದಲ್ಲಿ ಹಮಾದಿ ಚೆಂಡಿನೊಡನೆ ನುಗ್ಗಿದಾಗ ಉಂಟಾದ ಗಲಿಬಿಲಿಯಲ್ಲಿ ರಾಲ್ಟೆ ಎಡಗೋಲು ಕಂಬದ ಬಳಿ ಸಾರಿದ್ದರು. ಅಷ್ಟರಲ್ಲಿ ಅಮ್‌ಜಾದ್‌ ರಾದಿ ಅತೀವ ಚಾಣಾಕ್ಷ್ಯತನದಿಂದ ಚೆಂಡನ್ನು ಹಮಾದ್‌ ಅವರತ್ತ ತಳ್ಳಿದರು. ಉರುಳುತ್ತಾ ಬಂದ ಚೆಂಡನ್ನು ಹಮಾದಿ ಬಲಗಾಲಿನಿಂದ ಒದ್ದು ನಿರಾಯಾಸವಾಗಿ ‘ನೆಟ್‌’ನೊಳಗೆ ಸೇರಿಸಿದರು. ಹಮಾದಿ ಈ ಟೂರ್ನಿಯಲ್ಲಿ ತಾವು ಆಡಿದ 12 ಪಂದ್ಯಗಳಲ್ಲಿ 16 ಗೋಲುಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.
 
ಏಷ್ಯಾದ ಪ್ರಮುಖ ಫುಟ್‌ಬಾಲ್‌ ಟೂರ್ನಿಯಾಗಿರುವ ಎಎಫ್‌ಸಿ ಕಪ್‌ನಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯ ಕ್ಲಬ್‌ ಎಂಬ ಹೆಗ್ಗಳಿಕೆ ‘ಐ ಲೀಗ್‌ ಚಾಂಪಿಯನ್ಸ್‌’ ಬಿಎಫ್‌ಸಿ ತಂಡದ್ದಾಗಿದೆ. ಆದರೆ ಪ್ರಶಸ್ತಿ ಗೆದ್ದು ಇತಿಹಾಸ ಬರೆಯುವ ಅದೃಷ್ಟ ಬೆಂಗಳೂರಿನ ತಂಡಕ್ಕೆ ಒಲಿಯಲಿಲ್ಲ. ಏರ್‌ಫೋರ್ಸ್‌ ತಂಡ ಈ ಪ್ರಶಸ್ತಿ ಗೆದ್ದ ಇರಾಕ್‌ನ ಮೊದಲ ಕ್ಲಬ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮೊದಲಾರ್ಧದಲ್ಲಿ ಬೆಂಗಳೂರು ತಂಡದ ಆಟಗಾರರು ರಕ್ಷಣಾ ತಂತ್ರಕ್ಕೇ ಹೆಚ್ಚು ಒತ್ತು ನೀಡಿದ್ದರು.
 
ಇರಾಕ್‌ನ ಅನುಭವಿ ಆಟಗಾರರ ಪರಿಣಾಮಕಾರಿ ಆಕ್ರಮಣವನ್ನು ಹಿಮ್ಮೆಟ್ಟಿಸಲು ಜಾನ್‌ ಜಾನ್ಸನ್‌, ಜುನಾನ್, ರಿನೊ ಆ್ಯಂಟೊ ಮತ್ತು ನಿಶು ಕುಮಾರ್‌ ಸಾಕಷ್ಟು ಬೆವರು ಹರಿಸಿದರು. ಮೊದಲಾರ್ಧದಲ್ಲಿ ಚೆಂಡು ಬಹಳ ಹೊತ್ತು ಬೆಂಗಳೂರು ತಂಡದ ಆವರಣದ ಬಳಿಯೇ ಇತ್ತು.
 
ಬಿಎಫ್‌ಸಿ ಆಟಗಾರರೂ ಕೆಲವು ಸಲ ದಾಳಿಗೆ ಇಳಿದರಾದರೂ 30ನೇ ನಿಮಿಷದಲ್ಲಿ ಸಿಕ್ಕಿದ ಉತ್ತಮ ಅವಕಾಶ ವ್ಯರ್ಥಗೊಂಡಿತು. ಆಗ ಅಲ್ವಿನ್‌ ಜಾರ್ಜ್‌ ಕರಾರುವಾಕ್ಕಾಗಿ ಕಳುಹಿಸಿ ದ ಚೆಂಡನ್ನು ಲಿಂಗ್ಡೊ ‘ಹೆಡ್‌’ ಮಾಡಿದ ರಾದ ರೂ ಸ್ವಲ್ಪದರಲ್ಲಿ ಗುರಿ ತಪ್ಪಿತು. ಚೆಂಡು ಅಡ್ಡಪಟ್ಟಿ ಯ ಮೇಲಿಂದ ಹೊರ ಹೋಯಿತು.
 
ಇರಾಕ್‌ ತಂಡ ಕೂಡಾ ಕೆಲವು ಸಲ ಗುರಿ ತಪ್ಪಿತು. 22ನೇ ನಿಮಿಷದಲ್ಲಿ ಬಿಎಫ್‌ಸಿಯ ಗೋಲ್‌ ಕೀಪರ್‌ ರಾಲ್ಟೆ ಗೋಲು ಕಂಬಗಳ ನಡುವೆ ಇಲ್ಲದಿ ದ್ದಾಗ, ಹುಮಾಮ್‌ ತಾರೆಖ್‌ ಮಿಂಚಿನ ವೇಗದ ಲ್ಲಿ ದೂರದಿಂದ ಒದ್ದ ಚೆಂಡು ಗೋಲು ಕಂಬಗ ಳನ್ನು ಸವರಿ ಕೊಂಡು ಹೊರ ಹೋಯಿತು. ಇದಾಗಿ ಸರಿಯಾಗಿ 20 ನಿಮಿಷಗಳ ನಂತರ ಹಮಾ ದಿ ಅಹಮ್ಮದ್‌ ಬಲಅಂಚಿ ನಿಂದ ಭಾರತದ ಆವರಣ ದತ್ತ ಕಳುಹಿಸಿದ ಚೆಂಡನ್ನು ಅಮ್‌ಜಾದ್‌ ರಾದಿ ಪಡೆ ದರು.
 
ತಕ್ಷಣ ಅವರು ರಕ್ಷಣಾ ಆಟಗಾರರ ಕಣ್ತಪ್ಪಿಸಿ ಮುನ್ನುಗ್ಗಿದರಲ್ಲದೆ, ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ಎಮಾದ್‌ ಮಜೀದ್‌ ಅವರತ್ತ ತಳ್ಳಿದರು. ಮಜೀದ್‌ ಕ್ಷಣಮಾತ್ರದಲ್ಲಿ ಒದ್ದ ಚೆಂಡನ್ನು ಗೋಲಕೀಪರ್‌ ರಾಲ್ಟೆ ತಡೆದರು. ಉತ್ತರಾರ್ಧದಲ್ಲಿ ಬಿಎಫ್‌ಸಿಯ ಆಟಗಾರರು ಅನೇಕ ಸಲ ಎದುರಾಳಿ ಆವರಣದ ಬಳಿ ಅತ್ಯುತ್ತಮ ದಾಳಿ ನಡೆಸಿದರಾದರೂ, ಯಶಸ್ಸು ಸಿಗಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.