ADVERTISEMENT

ಬಿಎಸ್‌ಎನ್‌ಎಲ್‌ಗೆ ಅಗ್ರಪಟ್ಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಬೆಂಗಳೂರು: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ತಂಡದವರು ಚೊಚ್ಚಲ ಕರ್ನಾಟಕ ವಾಲಿ ಲೀಗ್‌ನ ಮೂರನೇ ಆವೃತ್ತಿಯಲ್ಲಿ ಚಾಂಪಿಯನ್ ಆದರು.
 
ಮುನ್ಸಿಪಲ್ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ ಬಿಎಸ್‌ಎನ್‌ಎಲ್ ಒಟ್ಟು 13 ಅಂಕಗಳನ್ನು ಕಲೆ ಹಾಕುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಈ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 25-23, 26-28, 27-25, 22-25, 15-10ರಲ್ಲಿ ಬಿಎಸ್‌ಎನ್‌ಎಲ್ ತಂಡವನ್ನು ಸೋಲಿಸಿತು. ಆದರೂ, ಸಂಚಾರ ನಿಯಮಿತ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಯಶ ಕಂಡಿತು. 
 
ಮೂರನೇ ಆವೃತ್ತಿಯ ಚಾಂಪಿಯನ್ ಬಿಎಸ್‌ಎನ್‌ಎಲ್ ತಂಡ 25,000, ದ್ವಿತೀಯ ಸ್ಥಾನ ಪಡೆದ ಎಎಸ್‌ಸಿ 20,000 ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಪಡೆದು ಮೂರನೇ ಸ್ಥಾನಕ್ಕೇರಿದ ಎಲ್‌ಐಸಿ 15,000 ರೂಪಾಯಿ ಬಹುಮಾನ ತನ್ನದಾಗಿಸಿಕೊಂಡಿತು.
 
ಮೂರನೇ ಆವೃತ್ತಿಯ ಕೊನೆಯ ದಿನವಾದ ಗುರುವಾರದ ಪಂದ್ಯದಲ್ಲಿ ಆರ್ಮಿ ಸರ್ವಿಸಸ್ ಕಾರ್ಪ್ಸ್ (ಎಎಸ್‌ಸಿ) 25-22, 25-18, 25-22ರಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ (ಡಿವೈಎಸ್‌ಎಸ್) ತಂಡವನ್ನು ಮಣಿಸಿತು. ಆದರೆ, ಡಿವೈಎಸ್‌ಎಸ್ ಕೇವಲ ಒಂದು ಪಾಯಿಂಟ್ ಗಳಿಸುವ ಮೂಲಕ ತನ್ನ ಹೋರಾಟವನ್ನು ಅಂತ್ಯಗೊಳಿಸಿತು.
 
ದಿನದ ಇತರ ಪಂದ್ಯಗಳಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) 25-20, 25-27, 25-21, 25-23ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಸೋಲಿಸಿತು. ಎಂಇಜಿ ಐದು ಅಂಕ ಗಳಿಸು ಮೂಲಕ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. 
 
ಪಾಯಿಂಟ್ ಪಟ್ಟಿ ಇಂತಿದೆ: ಬಿಎಸ್‌ಎನ್‌ಎಲ್ (13), ಎಎಸ್‌ಸಿ (12), ಎಲ್‌ಐಸಿ (11), ಎಂಇಜಿ (5), ಕೆಎಸ್‌ಪಿ (3) ಮತ್ತು ಡಿವೈಎಸ್‌ಎಸ್ (1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.