ADVERTISEMENT

ಬಿಸಿಸಿಐ- ಸಹಾರಾ ಬಿಕ್ಕಟ್ಟು; ಹೊರಬೀಳದ ಅಂತಿಮ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಹಾಗೂ ಐಪಿಎಲ್‌ಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಸಹಾರಾ ಇಂಡಿಯಾ ಭಾನುವಾರ ಇಲ್ಲಿ ಮಹತ್ವದ ಸಭೆ ನಡೆಸಿತು.

ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೂ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ಕೈಗೊಂಡ ಸೂಚನೆ ಲಭಿಸಿದೆ. ಸೋಮವಾರ ಮತ್ತೆ ಸಭೆ ಮುಂದುವರಿಸಲು ಇಬ್ಬರೂ ನಿರ್ಧರಿಸಿದ್ದಾರೆ.

ಸಹಾರಾ ಇಂಡಿಯಾ ಭಾರತ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದದ್ದು ಮಾತ್ರವಲ್ಲ ಐಪಿಎಲ್‌ನಲ್ಲಿ (ಪುಣೆ ವಾರಿಯರ್ಸ್ ತಂಡ) ಆಡುವುದಿಲ್ಲ ಎಂದಿತ್ತು. ಇದರಿಂದ ಉಂಟಾದ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ.

`ಸಹಾರಾ ಮತ್ತು ಬಿಸಿಸಿಐ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಭಾನುವಾರ ಮಹತ್ವದ ಮಾತುಕತೆ ನಡೆಸಿತು. ಸೋಮವಾರ ನಡೆಯುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಮಾತುಕತೆ ಮುಂದುವರಿಯಲಿದೆ~ ಎಂದು ಜಂಟಿ ಹೇಳಿಕೆಯಲ್ಲಿ ಸಹಾರಾ ಮತ್ತು ಬಿಸಿಸಿಐ ತಿಳಿಸಿದೆ.

ಸಭೆಯಲ್ಲಿ ಸಹಾರಾ ಸಮೂಹದ ನೇತೃತ್ವವನ್ನು ಅದರ ಮುಖ್ಯಸ್ಥ ಸುಬ್ರತೊ ರಾಯ್ ವಹಿಸಿದ್ದರು. ಬಿಸಿಸಿಐ ಪರ ಅಧ್ಯಕ್ಷ ಎನ್. ಶ್ರೀನಿವಾಸನ್, ಕಾರ್ಯದರ್ಶಿ ಸಂಜಯ್ ಜಗದಾಳೆ, ಖಜಾಂಚಿ ಅಜಯ್ ಶಿರ್ಕೆ ಮತ್ತು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹಾಜರಿದ್ದರು. ಸಭೆ ಒಂದೂವರೆ ಗಂಟೆಗೂ ಅಧಿಕ ಕಾಲ ನಡೆಯಿತು.

`ಭಾರತದ ಕ್ರಿಕೆಟ್ ಹಾಗೂ ಐಪಿಎಲ್‌ನ ಹಿತಾಸಕ್ತಿ ಪರಿಗಣಿಸಿ ಸಭೆ ನಡೆಸಿದ್ದೇವೆ~ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. `ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಅದಕ್ಕೆ ಬಿಸಿಸಿಐ ಕಾರ್ಯಕಾರಿ ಸಮಿತಿಯ ಅನುಮೋದನೆ ಲಭಿಸಬೇಕಿದೆ. ಈ ಕಾರಣ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ~ ಎಂದು ಉನ್ನತ ಮೂಲವೊಂದು ಹೇಳಿದೆ.

ಸಹಾರಾ ಮುಂದಿಟ್ಟ ಕೆಲವೊಂದು ಬೇಡಿಕೆಗಳನ್ನು ಈಡೇರಿಸಲು ಬಿಸಿಸಿಐ ಮನಸ್ಸು ಮಾಡಿದೆ ಎನ್ನಲಾಗಿದೆ. ಅದೇ ರೀತಿ ಒಪ್ಪಂದದ ಅವಧಿ ಕೊನೆಗೊಳ್ಳುವ ತನಕ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಮುಂದುವರಿಸುವಂತೆ ಸಹಾರಾವನ್ನು ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಐಪಿಎಲ್ ತಂಡ ಪುಣೆ ವಾರಿಯರ್ಸ್ ವಿಷಯವಾಗಿ ಮಾತ್ರ ಮಾತನಾಡುತ್ತೇವೆಂದು ಸಹಾರಾ ಈ ಮೊದಲೇ ಸ್ಪಷ್ಟವಾಗಿ ತಿಳಿಸಿತ್ತು. ಆದರೆ ಪ್ರಾಯೋಜಕತ್ವದ ವಿಷಯವೇ ಬಿಸಿಸಿಐಗೆ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.