ಕಿಂಗ್ಸ್‌ಟನ್ (ಪಿಟಿಐ): ಅಜಿಂಕ್ಯ ರಹಾನೆ (ಬ್ಯಾಟಿಂಗ್ 83; 204ಎ, 12ಬೌಂ, 1ಸಿ) ಮತ್ತು ವೃದ್ಧಿಮಾನ್ ಸಹಾ (47; 116ಎ, 5ಬೌಂ) ಸೋಮವಾರ ಕೆರಿಬಿಯನ್ ನಾಡಿನ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.
ಇವರಿಬ್ಬರ ಸುಂದರ ಜತೆಯಾಟದ ಬಲದಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಸಬೀನಾ ಪಾರ್ಕ್‌ನಲ್ಲಿ ನಡೆಯುತ್ತಿ ರುವ ಪಂದ್ಯದಲ್ಲಿ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 162 ಓವರ್‌ಗಳಲ್ಲಿ 6 ವಿಕೆಟ್‌ಗೆ 456ರನ್ ಕಲೆಹಾಕಿತ್ತು. ಇದರೊಂದಿಗೆ ವಿರಾಟ್ ಕೊಹ್ಲಿ ಪಡೆ 260ರನ್‌ಗಳ ಮುನ್ನಡೆ ಗಳಿಸಿತ್ತು. ಜಾಸನ್ ಹೋಲ್ಡರ್ ಬಳಗ ಪ್ರಥಮ ಇನಿಂಗ್ಸ್‌ನಲ್ಲಿ 196 ರನ್‌ಗೆ ಆಲೌಟ್ ಆಗಿತ್ತು.
ಅಮೋಘ ಆಟ: 5 ವಿಕೆಟ್‌ಗೆ 358ರನ್‌ಗಳಿಂದ ಮೂರನೇ ದಿನವಾದ ಸೋಮವಾರದ ಆಟ ಮುಂದುವರಿಸಿದ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ವದ್ಧಿಮಾನ್ ಸಹಾ ಆಸರೆಯಾದರು.
ಭಾನುವಾರದ ಆಟದ ಅಂತ್ಯಕ್ಕೆ 42 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ರಹಾನೆ, ಕಮಿನ್ಸ್ ಬೌಲ್ ಮಾಡಿದ 129ನೇ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟಿ ಅರ್ಧಶತಕ ಪೂರೈಸಿದರು.
93 ಎಸೆತಗಳ ಅವರ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು. ಇನ್ನೊಂದು ತುದಿಯಲ್ಲಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರು ರಹಾನೆಗೆ ಸೂಕ್ತ ಬೆಂಬಲ ನೀಡಿದರು. ಒಂದೊಂದು ರನ್ ಗಳಿಸುತ್ತಾ ವಿಂಡೀಸ್ ಬೌಲರ್‌ಗಳ ತಾಳ್ಮೆಗೆ ಸವಾಲಾದ ಸಹಾ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಮರೆಯಲಿಲ್ಲ.
ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಮುರಿಯಲು ವಿಂಡೀಸ್ ನಾಯಕ ಹೋಲ್ಡರ್ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. ಇಷ್ಟಾದರೂ ಪ್ರಯೋಜನ ಆಗಲಿಲ್ಲ. ಹೀಗಾಗಿ ಸ್ವತಃ ತಾವೇ 152ನೇ ಓವರ್ ಬೌಲ್ ಮಾಡಲು ಮುಂದಾದರು. ಅವರ ಈ ನಿರ್ಧಾರ ಫಲ ನೀಡಿತು. ಓವರ್‌ನ ನಾಲ್ಕನೇ ಎಸೆತದಲ್ಲಿ ಹೋಲ್ಡರ್, ಸಹಾ ವಿಕೆಟ್ ಉರುಳಿಸಿದರು.
ಸಹಾ ಪೆವಿಲಿಯನ್ ಸೇರುವ ಮುನ್ನ ರಹಾನೆ ಜೊತೆ ಆರನೇ ವಿಕೆಟ್‌ಗೆ 39.3 ಓವರ್‌ಗಳಲ್ಲಿ 98ರನ್ ಗಳಿಸಿ ತಂಡ 420ರ ಗಡಿ ದಾಟುವಂತೆ ನೋಡಿಕೊಂಡರು. ಸಹಾ ಔಟಾಗುತ್ತಿದ್ದಂತೆ ಕ್ರೀಸ್‌ಗೆ ಬಂದ ಅಮಿತ್ ಮಿಶ್ರಾ (ಬ್ಯಾಟಿಂಗ್ 21, 35ಎ, 1ಬೌಂ, 1ಸಿ) ಬಿರುಸಿನ ಬ್ಯಾಟಿಂಗ್ ಮೂಲಕ ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು.
ರಾಹುಲ್ ಮಿಂಚು: ಟೆಸ್ಟ್ ಮಾದರಿ ಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್ (158; 303ಎ, 15ಬೌಂ, 3ಸಿ) ಭಾನುವಾರ ಸಬೀನಾ ಪಾರ್ಕ್ ಅಂಗಳದಲ್ಲಿ ರನ್ ಮಳೆ ಸುರಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಕೂಡಾ ದಿಟ್ಟ ಆಟ ಆಡಿದ್ದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್: 52.3 ಓವರ್‌ಗಳಲ್ಲಿ 196.
ಭಾರತ: ಮೊದಲ ಇನಿಂಗ್ಸ್: 162 ಓವರ್‌ಗಳಲ್ಲಿ 6 ವಿಕೆಟ್‌ಗೆ 456 (ಕೆ.ಎಲ್. ರಾಹುಲ್ 158, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ ಬ್ಯಾಟಿಂಗ್ 83, ಆರ್.ಅಶ್ವಿನ್ 3, ವೃದ್ಧಿಮಾನ್ ಸಹಾ 47, ಅಮಿತ್ ಮಿಶ್ರಾ ಬ್ಯಾಟಿಂಗ್ 21; ಶಾನನ್ ಗ್ಯಾಬ್ರಿಯಲ್ 62ಕ್ಕೆ1, ಜಾಸನ್ ಹೋಲ್ಡರ್ 72ಕ್ಕೆ1, ರಾಸ್ಟನ್ ಚೇಸ್ 96ಕ್ಕೆ2, ದೇವೇಂದ್ರ ಬಿಷೂ 107ಕ್ಕೆ1).
(ವಿವರ ಅಪೂರ್ಣ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.