ADVERTISEMENT

ಬೆಳಕು ಮೂಡುವ ಮುನ್ನವೇ ಆವರಿಸಿದ ಕತ್ತಲು!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಮೀರ್‌ಪುರ (ಪಿಟಿಐ): ‘ವಿಶ್ವಕಪ್ ಕ್ರಿಕೆಟ್‌ನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 58 ರನ್‌ಗಳಿಗೆ ಪರಾಭವಗೊಂಡ ತಂಡದ ಪ್ರದರ್ಶನ ಬೇಸರ ಮೂಡಿಸಿದೆ. ಈ ದಿನ ನನ್ನ ಕ್ರಿಕೆಟ್ ಜೀವನದಲ್ಲಿ ಅತ್ಯಂತ ಕೆಟ್ಟ ದಿನ ಎಂದು ಬಾಂಗ್ಲಾದೇಶ ತಂಡದ ನಾಯಕ ಶಕೀಬ್-ಅಲ್-ಹಸನ್ ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಕೇವಲ ಆಟಗಾರರಿಗೆ ಮಾತ್ರ ಬೇಸರವಾಗಿಲ್ಲ. ನಮ್ಮ ತಂಡವನ್ನು ಬೆಂಬಲಿಸಿದ್ದ ತವರು ನೆಲದ ಅಭಿಮಾನಿಗಳಿಗೆ ನಿರಾಸೆ ಮಾಡಿದೆವು.

ಇಲ್ಲಿನ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನೆರದಿದ್ದ ಸುಮಾರು 25,000 ಕ್ರೀಡಾ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಿದೆವು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಹಗಲಿರುಳಿನ ಪಂದ್ಯ. ಆದರೆ ಇನ್ನೂ ಬೆಳಕು (ದೀಪಗಳು) ಮೂಡುವ ಮನ್ನವೇ ನಮ್ಮ ತಂಡಕ್ಕೆ ಕತ್ತಲು ಆವರಿಸಿತು’ ಎಂದು ಹಸನ್ ಹೇಳಿದ್ದಾರೆ. ‘ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನಾವು ನಿರೀಕ್ಷೆಯಂತೆ ಆಡಲಿಲ್ಲ.ಇದರಿಂದ ಅಭಿಮಾನಿಗಳಿಗೆ ಹತಾಶೆಯಾಗಿದೆ.

ತೀರಾ ಹೀನಾಯದ ಸೋಲು ಅನುಭವಿಸಬೇಕಾಗುತ್ತದೆ ಎಂದು ಕೂಡಾ ನಿರೀಕ್ಷಿಸಿರಲಿಲ್ಲ. ನನ್ನ ಕ್ರಿಕೆಟ್ ಜೀವನದಲ್ಲಿ ಅತ್ಯಂತ ಕೆಟ್ಟ ದಿನ ಎಂದು ಪಂದ್ಯದ ನಂತರ ನಾಯಕ ಹಸನ್ ಪ್ರತಿಕ್ರಿಯಿಸಿದರು. ‘ತವರು ನೆಲದಲ್ಲಿ ಆಡುವಾಗ ಸಹಜವಾಗಿಯೇ ನಮ್ಮ ತಂಡ ಗೆಲ್ಲಬೇಕು ಎನ್ನುವ ಆಸೆ, ಅಭಿಮಾನ ಎಲ್ಲರಿಗೂ ಇರುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ಉತ್ತಮ ಪ್ರದರ್ಶನ ತೋರಿದ ನಮ್ಮ ತಂಡದಿಂದ ಈ ಪಂದ್ಯದಲ್ಲೂ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದು ಹುಸಿಯಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.