ADVERTISEMENT

ಬೋಲ್ಟನ್‌ ಮಿಂಚು: ಆಸ್ಟ್ರೇಲಿಯಾಕ್ಕೆ ಸರಣಿ ಜಯ

ಪಿಟಿಐ
Published 15 ಮಾರ್ಚ್ 2018, 20:53 IST
Last Updated 15 ಮಾರ್ಚ್ 2018, 20:53 IST
ಬೋಲ್ಟನ್‌ ಮಿಂಚು: ಆಸ್ಟ್ರೇಲಿಯಾಕ್ಕೆ ಸರಣಿ ಜಯ
ಬೋಲ್ಟನ್‌ ಮಿಂಚು: ಆಸ್ಟ್ರೇಲಿಯಾಕ್ಕೆ ಸರಣಿ ಜಯ   

ವಡೋದರ (ಪಿಟಿಐ): ನಿಕೊಲ ಬೋಲ್ಟನ್‌ (84; 88ಎ, 12ಬೌಂ) ಅವರ ಅರ್ಧಶತಕ ಮತ್ತು ಜೆಸ್‌ ಜೊನಾಸೆನ್‌ (51ಕ್ಕೆ3) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡದವರು ಎರಡನೇ ಏಕದಿನ ಪಂದ್ಯದಲ್ಲಿ 60ರನ್‌ಗಳಿಂದ ಭಾರತವನ್ನು ಸೋಲಿಸಿದ್ದಾರೆ. ಇದರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ 2–0ಯಿಂದ ಸರಣಿ ಕೈವಶ ಮಾಡಿಕೊಂಡಿದ್ದಾರೆ.

ರಿಲಯನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಮೆಗ್‌ ಲ್ಯಾನಿಂಗ್‌ ಬಳಗ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 287ರನ್‌ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ಭಾರತ 49.2 ಓವರ್‌ಗಳಲ್ಲಿ 227ರನ್‌ಗಳಿಗೆ ಆಲೌಟ್‌ ಆಯಿತು.

ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ನಿಕೊಲ ಬೋಲ್ಟನ್‌ ಮತ್ತು ಅಲಿಸಾ ಹೀಲಿ (19; 37ಎ,3ಬೌಂ) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 54ರನ್‌ ಸೇರಿಸಿತು.

ADVERTISEMENT

13ನೇ ಓವರ್‌ನಲ್ಲಿ ಹೀಲಿ ಅವರನ್ನು ಪೂನಮ್‌ ಯಾದವ್‌ ಔಟ್‌ ಮಾಡಿದರು. ಬಳಿಕ ನಾಯಕಿ ಲ್ಯಾನಿಂಗ್‌ (24; 43ಎ, 2ಬೌಂ) ಮತ್ತು ಬೋಲ್ಟನ್‌ ಅಮೋಘ ಆಟದ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. 27ನೇ ಓವರ್‌ನಲ್ಲಿ ಲ್ಯಾನಿಂಗ್‌ಗೆ ಶಿಖಾ ಪಾಂಡೆ ಪೆವಿಲಿಯನ್‌ ದಾರಿ ತೋರಿಸಿದರು. ಇದರ ಬೆನ್ನಲ್ಲೇ ಬೋಲ್ಟನ್‌, ಏಕ್ತಾ ಬಿಷ್ಠ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದರು.

ನಂತರ ಎಲಿಸೆ ಪೆರಿ (ಔಟಾಗದೆ 70; 70ಎ, 6ಬೌಂ, 2ಸಿ) ಮತ್ತು ಬೆಥ್‌ ಮೂನಿ (56; 40ಎ, 9ಬೌಂ) ಅರ್ಧಶತಕ ಗಳಿಸಿ ಮಿಂಚಿದರು.

ದಿಟ್ಟ ಆರಂಭ: ‌ ಗುರಿ ಬೆನ್ನಟ್ಟಿದ ಭಾರತಕ್ಕೆ ‍‍ಪೂನಮ್‌ ರಾವುತ್‌ (27; 61ಎ, 2ಬೌಂ) ಮತ್ತು ಸ್ಮೃತಿ ಮಂದಾನ (67; 53ಎ, 12ಬೌಂ, 1ಸಿ) ದಿಟ್ಟ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 88ರನ್‌ ಸೇರಿಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು.

18ನೇ ಓವರ್‌ನಲ್ಲಿ ಮಂದಾನ ಔಟಾದರು. ನಂತರ ಆತಿಥೇಯರು ಕುಸಿತದ ಹಾದಿ ಹಿಡಿದರು. ದೀಪ್ತಿ ಶರ್ಮಾ (26; 45ಎ, 1ಬೌಂ), ನಾಯಕಿ ಮಿಥಾಲಿ (15; 14ಎ, 3ಬೌಂ) ಮತ್ತು ಹರ್ಮನ್‌ಪ್ರೀತ್‌ ಕೌರ್‌ (17;26ಎ, 2ಬೌಂ) ದೊಡ್ಡ ಮೊತ್ತ ಗಳಿಸಲು ವಿಫಲರಾದರು.

ವೇದಾ ಕೃಷ್ಣಮೂರ್ತಿ (2) ಮತ್ತು ಸುಷ್ಮಾ ವರ್ಮಾ (8) ಕೂಡ ಬೇಗನೆ ಔಟಾದರು. ಶಿಖಾ ಪಾಂಡೆ (15; 19ಎ, 2ಬೌಂ) ಮತ್ತು ಪೂಜಾ ವಸ್ತ್ರಕರ್‌ (30; 33ಎ, 2ಬೌಂ, 1ಸಿ) ಅವರು ದಿಟ್ಟ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ 9 ವಿಕೆಟ್‌ಗೆ 287 (ನಿಕೊಲ ಬೋಲ್ಟನ್‌ 84, ಅಲಿಸಾ ಹೀಲಿ 19, ಮೆಗ್‌ ಲ್ಯಾನಿಂಗ್‌ 24, ಎಲಿಸೆ ಪೆರಿ ಔಟಾಗದೆ 70, ಬೆಥ್‌ ಮೂನಿ 56, ನಿಕೊಲ ಕೆರಿ 16; ಶಿಖಾ ಪಾಂಡೆ 61ಕ್ಕೆ3, ಏಕ್ತಾ ಬಿಷ್ಠ್‌ 55ಕ್ಕೆ1, ಪೂನಮ್‌ ಯಾದವ್‌ 52ಕ್ಕೆ2, ಹರ್ಮನ್‌ಪ್ರೀತ್‌ ಕೌರ್‌ 23ಕ್ಕೆ1).

ಭಾರತ: 49.2 ಓವರ್‌ಗಳಲ್ಲಿ 227 (ಪೂನಮ್‌ ರಾವುತ್‌ 27, ಸ್ಮೃತಿ ಮಂದಾನ 67, ದೀಪ್ತಿ ಶರ್ಮಾ 26, ಮಿಥಾಲಿ ರಾಜ್‌ 15, ಹರ್ಮನ್‌ಪ್ರೀತ್‌ ಕೌರ್‌ 17, ಶಿಖಾ ಪಾಂಡೆ 15, ಪೂಜಾ ವಸ್ತ್ರಕರ್‌ 30; ಎಲಿಸೆ ಪೆರಿ 41ಕ್ಕೆ2, ನಿಕೊಲ ಕೆರಿ 44ಕ್ಕೆ1, ಜೆಸ್‌ ಜೊನಾಸೆನ್‌ 51ಕ್ಕೆ3, ಅಮಂಡಾ ವೆಲಿಂಗ್ಟನ್‌ 20ಕ್ಕೆ2, ಆ್ಯಷ್ಲೆಗ್‌ ಗಾರ್ಡನರ್‌ 44ಕ್ಕೆ1, ಮೆಗನ್‌ ಶುಟ್‌ 24ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 60ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.