ADVERTISEMENT

ಬ್ಯಾಟಿಂಗ್ ವೈಫಲ್ಯದಿಂದ ಸೋಲು: ಮಿಸ್ಬಾ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಬರ್ಮಿಂಗ್‌ಹ್ಯಾಂ (ಪಿಟಿಐ): ಬ್ಯಾಟಿಂಗ್ ವೈಫಲ್ಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಎದುರಾಯಿತು ಎಂದು ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.

ಬರ್ಮಿಂಗ್‌ಹ್ಯಾಂನಲ್ಲಿ ಸೋಮವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಾಕ್ ತಂಡ 67 ರನ್‌ಗಳ ಸೋಲು ಎದುರಿಸಿತ್ತು. ಸತತ ಎರಡನೇ ಸೋಲು ಅನುಭವಿಸಿರುವ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚುಕಡಿಮೆ ಅಸ್ತಮಿಸಿದೆ.

ಮಿಸ್ಬಾ ಬಳಗ ಶನಿವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ಭಾರತದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೂ ತಂಡಕ್ಕೆ ಸೆಮಿಫೈನಲ್ ಪ್ರವೇಶ ಖಚಿತವಲ್ಲ.

`ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದರಿಂದಾಗಿ ಬೌಲರ್‌ಗಳ ಉತ್ತಮ ಪ್ರಯತ್ನಕ್ಕೆ ತಕ್ಕ ಫಲ ಲಭಿಸುತ್ತಿಲ್ಲ' ಎಂದು ಮಿಸ್ಬಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

`ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ್ದ ಬ್ಯಾಟ್ಸ್‌ಮನ್‌ಗಳು ಇದೀಗ ವಿಫಲರಾದದ್ದು ಅಚ್ಚರಿ ಉಂಟುಮಾಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ 200 ಕ್ಕಿಂತ ಅಧಿಕ ರನ್ ಗಳಿಸಲು ಸಾಧ್ಯವಾಗದ್ದು ಬೇಸರದ ಸಂಗತಿ' ಎಂದು ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 234 (ಕಾಲಿನ್ ಇನ್‌ಗ್ರಾಮ್ 20, ಹಾಶಿಮ್ ಆಮ್ಲಾ 81, ಪ್ಲಾಫ್ ಡು ಪ್ಲೆಸ್ಸಿಸ್ 28, ಎ.ಬಿ. ಡಿವಿಲಿಯರ್ಸ್ 31, ಜೀನ್ ಪಾಲ್ ಡುಮಿನಿ 24, ಡೇವಿಡ್ ಮಿಲ್ಲರ್ 19, ರಾಬಿನ್ ಪೀಟರ್ಸನ್ ಔಟಾಗದೆ 16; ಮಹಮ್ಮದ್ ಇರ್ಫಾನ್ 27ಕ್ಕೆ1, ಜುನೈದ್ ಖಾನ್ 45ಕ್ಕೆ1, ಮಹಮ್ಮದ್ ಹಫೀಜ್ 38ಕ್ಕೆ1, ಸಯೀದ್ ಅಜ್ಮಲ್ 42ಕ್ಕೆ1, ಶೋಯಬ್ ಮಲೀಕ್ 27ಕ್ಕೆ1) ಪಾಕಿಸ್ತಾನ: 45 ಓವರ್‌ಗಳಲ್ಲಿ 167 (ನಾಸಿರ್ ಜಮ್‌ಶೆದ್ 42, ಮಿಸ್ಬಾ ಉಲ್ ಹಕ್ 55, ರ‌್ಯಾನ್ ಮೆಕ್‌ಲಾರೆನ್ 19ಕ್ಕೆ 4, ಲೊನ್ವಾಬೊ ಸೊಸೊಬೆ 23ಕ್ಕೆ 2, ಕ್ರಿಸ್ ಮಾರಿಸ್ 25ಕ್ಕೆ 2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 67 ರನ್ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.