ADVERTISEMENT

ಬ್ಯಾಟ್ಸ್‌ಮನ್‌ಗಳ `ಸ್ವರ್ಗ'ದಲ್ಲಿ ಬೌಲರ್ ಸ್ಥಿತಿ...

ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಪುಣೆ: ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸ್ವರ್ಗದ ತಾಣ ಎನಿಸಿರುವ ಇಲ್ಲಿನ ಸುಬ್ರತಾ ರಾಯ್              ಸಹಾರಾ ಕ್ರೀಡಾಂಗಣದಲ್ಲಿ ಬೌಲರ್‌ಗಳ ಸ್ಥಿತಿ ಏನಾಗಬಹುದು?ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವಿನ ಪಂದ್ಯ ಆರಂಭವಾಗಲು ಒಂದು ದಿನ ಬಾಕಿ ಇರುವಾಗ ಉಭಯ ತಂಡಗಳ ಬೌಲರ್‌ಗಳಲ್ಲಿ ಈ ಕುರಿತು ಗುಸು ಗುಸು ಚರ್ಚೆ ನಡೆಯುತ್ತಿದೆ. ಹಿಂದಿನ ಪಂದ್ಯಗಳಲ್ಲಿ ಈ ಪಿಚ್‌ನಲ್ಲಿ ರನ್ ಹೊಳೆ ಹರಿದಿದ್ದು ಇದಕ್ಕೆ ಕಾರಣ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ತಂಡಗಳ ನಡುವಿನ ಪಂದ್ಯ ಇದಕ್ಕೆ ಉದಾಹರಣೆ.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 1443 ರನ್‌ಗಳು ಹೊಳೆಯಾಗಿ ಹರಿದು ಬಂದಿದ್ದವು. ಅದರಲ್ಲಿ ಐದು ಶತಕ ಹಾಗೂ ಒಂದು ತ್ರಿಶತಕ ಸಹ ಸೇರಿತ್ತು. ನಾಲ್ಕೂ ದಿನ ಕಳೆದರೂ ಉರುಳಿದ್ದು ಕೇವಲ 13 ವಿಕೆಟ್. ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು.

ಈ ಪಿಚ್ `ಮರ್ಮ'ದ ಬಗ್ಗೆ ಉತ್ತರ ಪ್ರದೇಶ ತಂಡದ ತರಬೇತುದಾರ ಕನ್ನಡಿಗ ವೆಂಕಟೇಶ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದು, `ಸತತವಾಗಿ ಬ್ಯಾಟಿಂಗ್ ಮಾಡಿದರೆ ಒಂದೇ ತಂಡದವರು ಮೊದಲ ಇನಿಂಗ್ಸ್‌ನಲ್ಲಿ 1500ಕ್ಕಿಂತಲೂ ಹೆಚ್ಚು  ರನ್ ಗಳಿಸುವುದು ಈ ಪಿಚ್‌ನಲ್ಲಿ ಕಷ್ಟವೇನಲ್ಲ' ಎಂದು ಚಾಟಿ ಏಟು ಬೀಸಿದ್ದರು.

`ಸ್ಪೋರ್ಟಿಂಗ್ ವಿಕೆಟ್' ಸಜ್ಜುಗೊಳಿಸಿದ್ದರೆ ಫಲಿತಾಂಶ ಸಾಧ್ಯವಿತ್ತು. ಎಲ್ಲಾ ಕಡೆಯೂ ನೀರಸ ಪಿಚ್ ರೂಪುಗೊಂಡರೆ ಬೇಸರವಾಗುತ್ತದೆ. ಅದ್ದರಿಂದ ಆತಿಥ್ಯ ವಹಿಸುವ ಆಯಾ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಗಮನ ಹರಿಸಬೇಕು' ಎಂದು ಹೇಳಿದ್ದರು. ಆದ್ದರಿಂದ ಈ ಪಿಚ್‌ನ `ಆಟ' ಕರ್ನಾಟಕದ ಆತಂಕಕ್ಕೆ ಕಾರಣವಾಗಿದೆ.

ಬಿನ್ನಿ ಪಡೆಯ ಮುಂದಿದೆ ಸವಾಲು:ಈ ಚಂಚಲೆಯ ಪಿಚ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಣದ ಪಂದ್ಯಕ್ಕೂ ಅದೇ ರೀತಿ ವರ್ತಿಸಿದರೆ ಸ್ಟುವರ್ಟ್ ಬಿನ್ನಿ ಬಳಗ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಈ ಪಂದ್ಯದಲ್ಲಿ ಕರ್ನಾಟಕ ಪೂರ್ಣ ಪಾಯಿಂಟ್‌ನೊಂದಿಗೆ ಗೆಲ್ಲಲೇಬೇಕು. ಅಷ್ಟೇ ಅಲ್ಲ, `ಕಿತ್ತಳೆ ನಗರ' ನಾಗಪುರದಲ್ಲಿ ನಡೆಯಲಿರುವ ದೆಹಲಿ ಹಾಗೂ ವಿದರ್ಭ ನಡುವಿನ ಪಂದ್ಯದ ಫಲಿತಾಂಶವೂ ಮುಖ್ಯವಾಗುತ್ತದೆ.

ಮೂರು ಗೆಲುವು ಹಾಗೂ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿ 27 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿರುವ ಉತ್ತರ ಪ್ರದೇಶ `ಬಿ' ಗುಂಪಿನಿಂದ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಈಗ ಕರ್ನಾಟಕ, ದೆಹಲಿ ಮತ್ತು ವಿದರ್ಭ ತಂಡಗಳ ನಡುವೆ ಎಂಟರ ಘಟ್ಟ ಪ್ರವೇಶಿಸಲು ಪೈಪೋಟಿ ನಡೆದಿದೆ. ಈ ಪಂದ್ಯ ಡ್ರಾ ಆದರೆ, ಲೀಗ್ ಹಂತದಲ್ಲಿಯೇ ಕರ್ನಾಟಕ ಹೊರಬೀಳಲಿದೆ. ಮಹಾರಾಷ್ಟ್ರದ ಪಾಲಿಗೆ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ತಂಡ ಈಗಾಗಲೇ ರಣಜಿ ಟೂರ್ನಿಯಿಂದ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.