ADVERTISEMENT

ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಕಶ್ಯಪ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST
ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಕಶ್ಯಪ್
ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಕಶ್ಯಪ್   

ನವದೆಹಲಿ (ಪಿಟಿಐ): ಎದುರಾಳಿ ಒಡ್ಡಿದ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತ ಭಾರತದ ಪಿ. ಕಶ್ಯಪ್ ಶಾಂಘೈನಲ್ಲಿ ನಡೆಯುತ್ತಿರುವ ಚೀನಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲೂ ಕ್ವಾರ್ಟರ್ ಫೈನಲ್ ತಲುಪಿದ್ದ ಕಶ್ಯಪ್ ಗುರುವಾರ ನಡೆದ ಪಂದ್ಯದಲ್ಲಿ 12-21, 22-20, 21-14ರಲ್ಲಿ ವಿಯೆಟ್ನಾಂನ ಟಿಯಾನ್ ವಿನ್ ನುಯೆನ್ ಅವರನ್ನು ಸೋಲಿಸಿದರು. ಈ ಪಂದ್ಯ 69 ನಿಮಿಷಗಳ ಕಾಲ ನಡೆಯಿತು. ವಿಶ್ವ ರ‌್ಯಾಂಕಿಂಗ್‌ನಲ್ಲಿ 23ನೇ ಸ್ಥಾನ ಹೊಂದಿರುವ ಭಾರತದ ಆಟಗಾರ ಎಂಟರ ಘಟ್ಟದ ಪಂದ್ಯದಲ್ಲಿ ಆತಿಥೇಯ ಚೀನಾದ ಜೆಂಗ್‌ಮಿಂಗ್ ವಾಂಗ್ ಎದುರು ಪೈಪೋಟಿ ನಡೆಸಲಿದ್ದಾರೆ.

ಮೊದಲ ಗೇಮ್‌ನಲ್ಲಿ ಸೋಲು ಕಂಡ ಕಶ್ಯಪ್ ನಂತರ ಚೇತರಿಸಿಕೊಂಡು ತಿರುಗೇಟು ನೀಡಿದರು. ಎರಡನೇ ಗೇಮ್‌ನ ಆರಂಭದಲ್ಲಿ 1-5ರಲ್ಲಿ ಹಿನ್ನಡೆಯಲ್ಲಿದ್ದರೂ ಪುಟಿದೆದ್ದು ಬಂದು ಏಳು ಪಾಯಿಂಟ್‌ಗಳನ್ನು ಕಲೆ ಹಾಕಿದರು. ಒಂದು ಹಂತದಲ್ಲಿ ಇಬ್ಬರೂ ಆಟಗಾರರು 17-17, 20-20ರಲ್ಲಿ ಸಮಬಲ ಸಾಧಿಸಿದ ವೇಳೆ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಆದರೆ, ಕೊನೆಯಲ್ಲಿ ವೇಗವಾಗಿ ಎರಡು ಪಾಯಿಂಟ್ ಗಳಿಸಿ ಭಾರತದ ಆಟಗಾರ ಗೆಲುವಿನ ನಗೆ ಬೀರಿದರು.

ಡಬಲ್ಸ್ ಜೋಡಿಗೆ ಸೋಲು: ಭಾರತದ ತರುಣ್ ಕೋನಾ ಹಾಗೂ ಅರುಣ್ ವಿಷ್ಣು ಅವರು ಪುರುಷರ ಡಬಲ್ಸ್ ವಿಭಾಗದಲ್ಲಿ ಸೋಲು ಕಂಡರು. 32 ನಿಮಿಷ ನಡೆದ ಹಣಾಹಣಿಯಲ್ಲಿ ಈ ಜೋಡಿ 10-21, 8-21ರಲ್ಲಿ ಅಗ್ರ ಶ್ರೇಯಾಂಕದ ಆಟಗಾರರಾದ ಡೆನ್ಮಾರ್ಕ್‌ನ ಮಥಾಯಸ್ ಬೋ ಹಾಗೂ ಕಾರ್ಸ್ಟೆನ್ ಮೊಗೆನ್‌ಸೆನ್ ಎದುರು ನಿರಾಸೆ ಕಂಡರು.

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ಎನ್. ರೆಡ್ಡಿ ಅವರೂ ಸೋಲು ಅನುಭವಿಸಿದರು. ಇಂಡೊನೇಷ್ಯಾದ ರಿಕಿ ವಿದಿಯಂತೊ ಮತ್ತು ಪುಷ್ಪಿತಾ ರಿಚಿ ಅವರು ಕೇವಲ 24 ನಿಮಿಷ ಹೋರಾಟ ನಡೆಸಿ 21-11, 21-15ರಲ್ಲಿ ಭಾರತದ ಜೋಡಿಗೆ ಸೋಲುಣಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಪಿ.ವಿ. ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿಯೇ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.